‘ಜಂಟಲ್‍ಮನ್’ ಆಗಿ ತೆರೆಗೆ ಬರುತ್ತಿದ್ದಾರೆ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಬಹಳಷ್ಟು ಕುತೂಹಲ ಹುಟ್ಟುಹಾಕಿರುವಂತಹ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.  ಚಿತ್ರದ ನಾಯಕ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಕಾಯಿಲೆಯಿಂದ ನರಳುತ್ತಿರುತ್ತಾನೆ. ಸಾಮಾನ್ಯವಾಗಿ ಮನುಷ್ಯ ದಿನವೊಂದಕ್ಕೆ ಏಳು ಗಂಟೆ ನಿದ್ದ ಮಾಡುತ್ತಾನೆ.

ಆದರೆ, ಈ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ದಿನದ ಆರು ಗಂಟೆ ಮಾತ್ರ ಎಚ್ಚರದಿಂದಿದ್ದು, ಉಳಿದ ಹದಿನೆಂಟು ಗಂಟೆಯೂ ನಿದ್ರೆಯಲ್ಲೇ ಮುಳಗಿರುತ್ತಾನೆ. ಅಂಥ ಕಾಯಿಲೆ ಹೊಂದಿದ ನಾಯಕನ ಬದುಕು, ಬವಣೆ ಹೇಗಿರುತ್ತೆ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೆ.ಮಂಜು ಪುತ್ರನನ್ನು ಪಡ್ಡೆಹುಲಿ ಚಿತ್ರದ ಮೂಲಕ ಲಾಂಚ್ ಮಾಡಿದ್ದ ನಿರ್ದೇಶಕ ಗುರು ದೇಶಪಾಂಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಹಿಂದೆ ರಾಜಹಂಸ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್‍ಕುಮಾರ್ ಜಂಟಲ್‍ಮನ್‍ಗೆ ಕಥೆ, ಸ್ಕ್ರಿಪ್ಟ್ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.  ಚಿತ್ರದಲ್ಲಿ ಬೇಬಿ ಆರಾಧ್ಯ ಎಂಬ ಮಗು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದೆ. ನಾಯಕನನ್ನು ಬಿಟ್ಟರೆ ಆ ಪಾತ್ರವೇ ಚಿತ್ರದಲ್ಲಿ ಪ್ರಧಾನ. ಚಿತ್ರದಲ್ಲಿ ನಾಯಕ ಪ್ರಜ್ವಲ್ ತಾನು ಎಚ್ಚರವಾಗಿರುವ ಕೇವಲ ಆರು ಗಂಟೆಗಳ ಸಮಯದಲ್ಲಿ ತನ್ನ ಬುದ್ದಿ ಮತ್ತು ಶಕ್ತಿಯನ್ನು ಉಪಯೋಗಿಸಿ ಹೇಗೆ ಕೆಲಸ ಮಾಡುತ್ತಾನೆ ಎಂಬುದನ್ನು ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಹಿನ್ನೆಲೆಯಲ್ಲಿ ಹೇಳಲು ನಿರ್ದೇಶಕರು ಟ್ರೈ ಮಾಡಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ನಾನು ಗುರು ದೇಶಪಾಂಡೆ ಅವರೊಂದಿಗೆ ಈ ಹಿಂದೆ ಠಾಕ್ರೆ ಎಂಬ ಚಿತ್ರವನ್ನು ಮಾಡಬೇಕಾಗಿತ್ತು. ಕಾರಣಾಂತರದಿಂದ ಆ ಚಿತ್ರ ಸೆಟ್ಟೇರಲಿಲ್ಲ. ಈ ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ನಿಜ ಜೀವನಕ್ಕೆ ಹತ್ತಿರವಿದ್ದಂತೆಯೇ ನಿರ್ದೇಶಕರು ಚಿತ್ರೀಕರಿಸಿದ್ದಾರೆ ಎಂದು ಹೇಳಿದರು. ನಿರ್ಮಾಪಕ ಗುರುದೇಶ ಪಾಂಡೆ ಮಾತನಾಡುತ್ತ, ನಮ್ಮ ಬ್ಯಾನರ್‍ನಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು, ಪಡ್ಡೆಹುಲಿ ಚಿತ್ರದ ಶೂಟಿಂಗ್ ಟೈಮ್‍ನಲ್ಲಿ ಜಡೇಶ್ ಈ ಕಥೆಯನ್ನು ಹೇಳಿದರು.

ಅವರು ಹೇಳಿದ ಆ ಕಥೆಯಲ್ಲಿ ಏನೋ ಒಂದು ವಿಶೇಷತೆಯಿತ್ತು. ತಕ್ಷಣ ಒಪ್ಪಿದೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‍ನಿಂದ ಬಳಲುವ ನಾಯಕ ತನಗಿರುವ ಕಡಿಮೆ ಅವಧಿಯಲ್ಲೇ ಜೀವನದ ಎಲ್ಲಾ ಸುಖ-ದುಃಖಗಳನ್ನು ಅನುಭವಿಸಬೇಕಾಗಿರುತ್ತದೆ. ಮನದ ಭಾವನೆಗಳನ್ನು ವ್ಯಕ್ತಪಡಿಸಬೇಕಿರುತ್ತೆ. ಅಜನೀಶ ಲೋಕನಾಥ್ ಚಿತ್ರದ 5 ಹಾಡುಗಳನ್ನು ಸೊಗಸಾಗಿ ಮಾಡಿಕೊಟ್ಟಿದ್ದಾರೆ.

ಐದು ಸಾಹಸ ದೃಷ್ಯಗಳು ಚಿತ್ರದಲ್ಲಿದ್ದು, ಅದರಲ್ಲೂ ಕ್ಲೈಮ್ಯಾಕ್ಸ್‍ನಲ್ಲಿ ಬರುವ ಚಾಕು ಫೈಟ್ ತುಂಬಾ ಕುತೂಹಲಕಾರಿಯಾಗಿದೆ ಎಂಬುದಾಗಿ ಹೇಳಿದರು. ಚಿತ್ರದ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಸಿಕೊಂಡಿದ್ದಾರೆ. ತಪಸ್ವಿನಿ ಎಂಬ ಪಾತ್ರ ನನ್ನದು. ಮನೆಯ ಹಿರಿಮಗಳು. ತಂದೆ ನಾನು ಏನೇ ಮಾಡಿದರೂ ತಪ್ಪು ಎಂದು ಹೇಳುತ್ತಾರೆ, ಆದರೆ ತಂಗಿ ಮಾಡಿದ್ದೇ ಸರಿ ಎನ್ನುವ ವಾದ ಅವರದು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಾನು ನಾಯಕನನ್ನು ಲವ್ ಮಾಡಿದಾಗ ಏನೆಲ್ಲ ಘಟನೆಗಳು ಸಂಭವಿಸಬಹುದು ಎಂಬುದನ್ನು ಹೇಳಲಾಗಿದೆ ಎಂದು ತಿಳಿಸಿದರು. ಆರೂರು ಸುಧಾಕರ ಶೆಟ್ಟಿ ಈ ಚಿತ್ರದ ಕ್ಯಾಮೆರಾ ವರ್ಕ್ ನಿರ್ವಹಿಸಿದ್ದಾರೆ.

ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಈ ಚಿತ್ರದ ಸಿಡಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತ, ಒಂದು ವಿಭಿನ್ನ ಚಿತ್ರ ನಿಮ್ಮ ಮುಂದೆ ಬರ್ತಿದೆ. ಕನ್ನಡಿಗರೇ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಿ. ಒಬ್ಬ ತಂತ್ರಜ್ಞ ಚಿತ್ರವನ್ನು ನಿರ್ಮಿಸಿರುವುದು ಸಂತೋಷವಾಗುತ್ತದೆ. ಏಕೆಂದರೆ,ನಾನು ಕೂಡ ತಂತ್ರಜ್ಞನಾಗೇ ಬಂದು ನಾಯಕನಾದೆ. ನಿರ್ಮಾಪಕ ಗುರು ದೇಶಪಾಂಡೆ ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೆ ತಮ್ಮ ಪ್ರಥಮ ಪ್ರಯತ್ನದ ಚಿತ್ರದಲ್ಲೇ ಹಣ ಬರಲಿ ಎಂದು ಹೇಳಿ ಇಡೀ ತಂಡಕ್ಕೆ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ನಾಯಕನ ತಂದೆ-ತಾಯಿ, ಮಡದಿ, ಸಹೋದರ ಹಾಗೂ ಹಿತೈಷಿಗಳು ಹಾಜರಿದ್ದರು. ಒಟ್ಟಾರೆ ಬಹಳಷ್ಟು ಅದ್ಧೂರಿ ಪ್ರಚಾರದ ಮೂಲಕ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Facebook Comments

One thought on “‘ಜಂಟಲ್‍ಮನ್’ ಆಗಿ ತೆರೆಗೆ ಬರುತ್ತಿದ್ದಾರೆ ಪ್ರಿನ್ಸ್ ಪ್ರಜ್ವಲ್ ದೇವರಾಜ್

Comments are closed.