ವೇದ ಜ್ಞಾನ ಪಸರಿಸಲು ತನ್ನ ಸಂಸ್ಥೆಯನ್ನೇ ಮಾರಿದ ಜರ್ಮನ್ ವಿದ್ವಾಂಸ…!

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಫೆ.14-ಭಾರತೀಯ ಭವ್ಯ ಸಂಸ್ಕøತಿ ಮತ್ತು ಪರಂಪರೆಗಳಿಂದ ಅನೇಕ ವಿದೇಶಿಯರು ಪ್ರಭಾವಿತರಾಗಿ ಅದನ್ನು ಅನುಸರಿಸುವುದಲ್ಲದೇ, ಪ್ರಚಾರ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ. ಇಂಥವರ ಸಾಲಿನಲ್ಲಿ ಜರ್ಮನಿಯ ವಿದ್ವಾಂಸ ನೊರ್ಬರ್ಟ್ ವೀಸ್ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.  ಭಾರತೀಯ ಪ್ರಾಚೀನ ಧರ್ಮಗ್ರಂಥದಿಂದ ನೊರ್ಬರ್ಟ್ ಎಷ್ಟರಮಟ್ಟಿಗೆ ಪ್ರಭಾವಿತರಾಗಿದ್ದಾರೆ ಎಂದರೆ ವೇದ ಜ್ಞಾನವನ್ನು ಜರ್ಮನಿ ಮತ್ತು ಇತರ ದೇಶಗಳಲ್ಲಿ ಪಸರಿಸಲು ಇವರು ತಮ್ಮ ವಾಣಿಜ್ಯ ಸಂಸ್ಥೆಯೊಂದನ್ನು ಮಾರಾಟ ಮಾಡಿದ್ದಾರೆ.

ಅದರಿಂದ ಲಭಿಸಿದ ಹಣವನ್ನು ವೇದ ಜ್ಞಾನ ಪ್ರಚಾರಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಜರ್ಮನಿಯಲ್ಲೇ 20 ವರ್ಷಗಳ ಹಿಂದೆ ವೇದಾದ್ಯಯನ ಮಾಡಿರುವ ಇವರು, ತಮ್ಮ ಬ್ಯುಸಿನೆಸ್ ಕನ್ಸಲ್‍ಟೆನ್ಸಿ ಸಂಸ್ಥೆಯನ್ನು ಮಾರಾಟ ಮಾಡಿದ್ದಾರೆ. ಜರ್ಮನ್ ವಿದ್ವಾಂಸ ನೊರ್ಬರ್ಟ್ ಕಳೆದ 20 ವರ್ಷಗಳಿಂದಲೂ ಅಗಾಗ ಉತ್ತರಪ್ರದೇಶದ ಮಹಾ ಪುಣ್ಯ ಕ್ಷೇತ್ರ ವಾರಣಸಿಗೆ ಭೇಟಿ ನೀಡಿ ವೇದೋಪನಿಷತ್ತುಗಳ ಉಪದೇಶ ಮಾಡುತ್ತಾರೆ.

ಈ ಜಗತ್ತಿನಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೂ ವೇದಗ್ರಂಥದಲ್ಲಿ ಪರಿಹಾರವಿದೆ ಎಂದು ಹೇಳುವ ಈ ಪ್ರಖಾಂಡ ವೇದ ವಿದ್ವಾಂಸ, ವೇದಗಳು ವಿಜ್ಞಾನದ ಭಂಡಾರ. ಇದನ್ನು ಸಾಬೀತು ಮಾಡಲು ತಾವು ವೈಜ್ಞಾನಿಕ ಸೂತ್ರಗಳನ್ನು ಬಳಸುತ್ತಿರುವುದಾಗಿ ವಿವರಿಸಿದ್ದಾರೆ.  ವೇದಾಂತವು ಸಂಪೂರ್ಣ ವಿಜ್ಞಾನ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಇದು ಈ ವಿಶ್ವದ ಪ್ರತಿಯೊಬ್ಬರಿಗೂ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ವೇದದ ಜ್ಞಾನದಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಆ ಮೂಲಕ ವಿಶ್ವದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತಾಗುತ್ತದೆ ಎನ್ನುತ್ತಾರೆ ನೊರ್ಬರ್ಟ್ ವೀಸ್.

ವೇದಗಳು ಅತ್ಯಾಧುನಿಕ ತಂತ್ರಜ್ಞಾನಗಳಿದ್ದಂತೆ. ಅತ್ಯಂತ ಪ್ರಾಚೀನ, ಜಟಿಲ ಮತ್ತು ಕಠಿಣ ಜ್ಞಾನವು ಅಂದಿಗೂ, ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತ. ಈ ಜ್ಞಾನವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ ಅನುಸರಿಸಬೇಕು ಮತ್ತು ಅದನ್ನು ಅಳವಡಿಸಿಕೊಳ್ಳಬೇಕು ಎಂದು ಜರ್ಮನ್ ವಿದ್ವಾಂಸರು ಪ್ರತಿಪಾದಿಸುತ್ತಾರೆ.  ವಾರಾಣಸಿ ತಾರಾ ನಗರದ ಜಗತ್ ಶಿಶ್ಯ ವೇದ ಮಂದಿರದಲ್ಲಿ ನಡೆಯುವ ವೇದೋಪನಿಷತ್ತು ಮತ್ತು ಆಧ್ಯಾತ್ಮಿಕ ಯೋಗ ವಿಜ್ಞಾನಗಳ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಇವರು ಇತ್ತೀಚೆಗೆ ವಿಶೇಷ ಉಪನ್ಯಾಸ ನೀಡಿದರು. ನೊರ್ಬಟ್ ಅವರ ಗುರು ಪಂಡಿತ್ ಶಿವ ಪೂಜನ್ ಚತುರ್ವೇದಿ ಅವರು ಇದೇ ಮಂದಿರದ ಮಹಾ ವಿದ್ವಾಂಸರು.

ಜರ್ಮನಿಯ ಮುನಿಚ್ ನಗರದವರಾದ ಇವರು ಅಲ್ಲಿ ವೇದ ಮತ್ತು ಯೋಗ ಕೇಂದ್ರ ಆರಂಭಿಸಿದ್ದಾರೆ. ಆಗಾಗ ಇಲ್ಲಿ ನಡೆಯುವ ವಿಚಾರಸಂಕಿರಣ ಮತ್ತು ಧಾರ್ಮಿಕ ಸಭೆ-ಸಮಾರಂಭಗಳಿಗೆ ಪ್ರಾಯೋಜಕತ್ವ ವಹಿಸುತ್ತಾರೆ. ನಾನು ಚಿಕ್ಕವಯಸ್ಸಿನಲ್ಲೇ ತತ್ತ್ವಶಾಸ್ತ್ರ ಅಧ್ಯಯನ ಆರಂಭಿಸಿದೆ. ಆದರೆ ಪಾಶ್ಚಿಮಾತ್ಯ ತತ್ವಶಾಸ್ತ್ರಗಳು ಮತ್ತು ಸಿದ್ಧಾಂತಗಳು ಆಧ್ಯಾತ್ಮಿಕ ಜೀವನ ಕುರಿತ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾದರು. ಇದೇ ಕಾರಣಕ್ಕಾಗಿ ನಾನು ವೇದಗಳನ್ನು ಅಧ್ಯಯನ ಮಾಡಿ ಈ ವಿಶ್ವದಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದೇನೆ ಎನ್ನುತ್ತಾರೆ ವೀಸ್.

Facebook Comments