ಗಿರೀಶ್ ಕೆ.ನಾಶಿಗೆ ಉತ್ತರ ಕರ್ನಾಟಕ ನಿವಾಸಿಗಳಿಂದ ಭಾರೀ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30-ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಉತ್ತರ ಕರ್ನಾಟಕ ಭಾಗದ ಪ್ರತಿಯೊಬ್ಬ ನಿವಾಸಿಯನ್ನು ಖುದ್ದಾಗಿ ಭೇಟಿ ಮಾಡುವ ಆಸೆಯಿದೆ. ಆದರೆ ಸಮಯದ ಅಭಾವದಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿಂದು ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ ಅವರು, ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಸಾವಿರಾರು ಮಂದಿ ತಮ್ಮ ಮೇಲೆ ವಿಶೇಷ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಗರಿಷ್ಠ ಪ್ರಮಾಣದ ಪ್ರಯತ್ನ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೊ ಅಷ್ಟು ಜನರನ್ನು ತಲುಪುವುದು ನನ್ನ ಗುರಿ. ಸಮಯದ ಕೊರತೆಯಿಂದಾಗಿ ಎಲ್ಲರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ನಿಮ್ಮ ಪ್ರೀತಿ, ಅಭಿಮಾನ ನನಗೆ ಶ್ರೀರಕ್ಷೆಯಾಗಿದೆ ಎಂದು ಗಿರೀಶ್ ಕೆ.ನಾಶಿ ಹೇಳಿದ್ದಾರೆ.

ಉಪಚುನಾವಣೆ ಸಮೀಪಿಸುತ್ತಿದ್ದಂತೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ಪರವಾದ ಸುನಾಮಿಯೇ ಎದ್ದಿದೆ. ಕಳೆದ ಎರಡು ಅವಧಿಯಿಂದ ಜೆಡಿಎಸ್ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಆಗಿದೆ. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಪಾಠ ಕಲಿಸಲೇಬೇಕು ಎಂದು ಕಾರ್ಯಕರ್ತರು ಹಠ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಕ್ಷೇತ್ರದ ಬಗ್ಗೆ ಹೆಚ್ಚು ಒತ್ತು ನೀಡಿರು ವುದು ನಮಗೆ ಆನೆಬಲ ಬಂದಂ ತಾಗಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 427ಕೋಟಿ ರೂ. ಮತ್ತು ಅದಕ್ಕೂ ಮೊದಲು ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ್ದ 200 ಕೋಟಿ ರೂ. ಅನುದಾನ ಎಲ್ಲಿ ಹೋಯಿತು ಎಂದು ಜನ ಹಿಂದಿನ ಶಾಸಕರನ್ನು ಲೆಕ್ಕ ಕೇಳುತ್ತಿದ್ದಾರೆ. ಆದರೆ ಹಿಂದಿನ ಶಾಸಕರು ಯಾವುದೇ ಸಮಜಾಯಿಷಿ ನೀಡದೆ ಕೇವಲ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಇಂತಹ ಮಾತುಗಳಿಗೆ ಮರಳಾಗುವುದಿಲ್ಲ ಎಂದರು.

ಮನೆ ಮನೆ ಪ್ರಚಾರದ ವೇಳೆ ಜೆಡಿಎಸ್‍ನ ಪ್ರಮುಖ ನಾಯಕರು ಮಾತನಾಡುತ್ತಾ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಅಗತ್ಯವೇ ಇರಲಿಲ್ಲ. ಜನ ಕೊಟ್ಟ ಅಧಿಕಾರವನ್ನು ತಿರಸ್ಕರಿಸಿ ಮತದಾರರಿಗೆ ಅಪಮಾನ ಮಾಡಿ ಮತ್ತೆ ಅವಕಾಶ ಕೊಡಿ ಎಂದು ಕೇಳುತ್ತಿರುವುದು ಅಕ್ಷಮ್ಯ ಅಪರಾಧ. ಇದಕ್ಕಾಗಿ ಜನ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಬಗ್ಗೆ ಜನರಲ್ಲಿ ಅಪಾರ ಒಲವಿದೆ. ಜಾತಿ, ಧರ್ಮ ಭೇದವಿಲ್ಲದೆ ಒಕ್ಕೊರಲಾಗಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ ಬೇಕಿಲ್ಲ. ಹಾಗಾಗಿ ಜೆಡಿಎಸ್‍ಗೆ ಮತ ಹಾಕಿ ವಿದ್ಯಾವಂತರನ್ನು ಆಯ್ಕೆ ಮಾಡುತ್ತೇವೆ ಎಂದು ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಅಭ್ಯರ್ಥಿ ಗಿರೀಶ್ ಕೆ.ನಾಶಿ ಅವರು ಹೋದ ಕಡೆಯಲ್ಲೆಲ್ಲ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಕುಮಾರಸ್ವಾಮಿ, ದೇವೇಗೌಡರು ಹಾಗೂ ಇತರ ನಾಯಕರು ಪ್ರಚಾರಕ್ಕೆ ಬಂದಾಗಲಂತೂ ಜನಸಾಗರವೇ ಹರಿದು ಬರುತ್ತಿದೆ. ಸ್ವಪ್ರೇರಣೆಯಿಂದ ಜನರೇ ಜೆಡಿಎಸ್ ಪರವಾಗಿ ಮತ ಕೇಳುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿಸಿದೆ ಎಂದು ತಿಳಿಸಿದ್ದಾರೆ.

Facebook Comments