ಮಹಾಲಕ್ಷ್ಮಿಲೇಔಟ್‍ನಲ್ಲಿ ಜೆಡಿಎಸ್ ಗೆಲುವು ನನ್ನದೇ : ಗಿರೀಶ್ ಕೆ.ನಾಶಿ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2-ಜೆಡಿಎಸ್ ಭದ್ರ ಕೋಟೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ವಿಶ್ವಾಸ ವ್ಯಕ್ತಪಡಿಸಿದರು. ನಾಗಪುರ, ಬಿಇಎಂಎಲ್ ಲೇಔಟ್, ಶಕ್ತಿಗಣಪತಿ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಗಿರೀಶ್ ಕೆ.ನಾಶಿ ಅವರು, ಬೆಂಬಲಿಗರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇಔಟ್ ಜೆಡಿಎಸ್‍ನ ಭದ್ರಕೋಟೆ. ಕ್ಷೇತ್ರದ ಜನ ಜಾತ್ಯತೀತವಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿಯೂ ಪಕ್ಷದ ಗೆಲುವಿಗೆ ಸಹಕರಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡ ಮೇಲೆ ನನ್ನ ಗೆಲುವಿನ ಹುಮ್ಮಸ್ಸು ನೂರ್ಮಡಿಯಾಗಿದೆ.

ಕ್ಷೇತ್ರದ ಅಮೂಲಾಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪರ ಯೋಜನೆಗಳು ಬಡವರ ಪರ ಕೆಲಸಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕ್ಷೇತ್ರದಲ್ಲಿ ಹೋದೆಡೆ ಬಂದಡೆಯಲ್ಲೆಲ್ಲ ಜನರು ಉತ್ತಮ ಒಲವು ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಚಿತ ಎಂದು ನುಡಿದರು.

ಕ್ಷೇತ್ರದಲ್ಲಿರುವ ಎಲ್ಲಾ ಸಮುದಾಯದವರು, ಅಲ್ಪಸಂಖ್ಯಾತರು, ಉತ್ತರ ಕರ್ನಾಟಕ ಭಾಗದ ನಿವಾಸಿಗಳು ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾವುದೇ ಪಕ್ಷವನ್ನಾಗಲಿ, ವ್ಯಕ್ತಿಯನ್ನಾಗಲಿ ದೂಷಿಸುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕರ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದು, ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜಯ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಇಂದು ಬೆಳಗ್ಗೆ ಸುರಿವ ಮಳೆಯಲ್ಲೂ ಪ್ರಚಾರ ಬಿರುಸಿನಿಂದ ನಡೆದಿತ್ತು. ಬಿಬಿಎಂಪಿ ಸದಸ್ಯರಾದ ಭದ್ರೇಗೌಡ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ವಾರ್ಡ್ ಅಧ್ಯಕ್ಷ ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಸುರೇ± ïಕುಮಾರ್ ಸೇರಿದಂತೆ ಅನೇಕ ನಾಯಕರು ಗಿರೀಶ್ ಕೆ.ನಾಶಿ ಅವರೊಂದಿಗಿದ್ದು, ಜನರ ಮನವೊಲಿಸುವ ಪ್ರಯತ್ನ ಮಾಡಿದರು.
ಹೋದ ಕಡೆಯಲ್ಲೆಲ್ಲ ಜನ ಜೆಡಿಎಸ್‍ನ ಅಭ್ಯರ್ಥಿಗೆ ಹಾಗೂ ಮುಖಂಡರಿಗೆ ಭಾರೀ ಬೆಂಬಲ ವ್ಯಕ್ತಪಡಿಸಿದರು.

Facebook Comments