ಹೆತ್ತ ತಾಯಿಯ ಎದುರಿನಲ್ಲೇ ಚಿಕ್ಕಪ್ಪನಿಂದ ಬಾಲಕಿ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಜ.13- ದಿವ್ಯಾಂಗ ಬಾಲಕಿಯ ಕತ್ತು ಕೊಯ್ದು ಕೊಲೆ ಮಾಡಿರುವ ಅತ್ಯಂತ ಪೈಶಾ ಚಿಕ, ನಾಗರೀಕ ಸಮಾಜವೇ ತಲೆತಗ್ಗಿಸು ವಂತಹ ಘೋರ ಘಟನೆಯೊಂದು ಜಿಲ್ಲಾಯಲ್ಲಿ ನಡೆದಿದೆ. ಸ್ವಂತ ಚಿಕ್ಕಪ್ಪನೇ ಐದು ವರ್ಷದ ದಿವ್ಯಾಂಗ ಬಾಲಕಿಯ ಕತ್ತುಕೊಯ್ದು ಹೆತ್ತ ತಾಯಿಯ ಎದುರಿನಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ತಾಲ್ಲೂಕಿನ ಅಂಗರೇಕನಹಳ್ಳಿ ಗ್ರಾಮದಲ್ಲಿ ಸಂಜೆ ನಡೆದಿದೆ.

ಗ್ರಾಮದ ಕೃಷ್ಣಮೂರ್ತಿ-ಶಶಿಕಲಾ ದಂಪತಿಯ ಹಿರಯ ಮಗಳು ಚರ್ವಿತ ಕೊಲೆಯಾದ ನತದೃಷ್ಟ ಬಾಲಕಿ.  ಸ್ವಂತ ಅಣ್ಣನ ಮಗಳನ್ನೇ ಇಷ್ಟು ನಿರ್ದಯವಾಗಿ ಅತ್ತಿಗೆಯ ಸಮಕ್ಷಮದಲ್ಲೇ ಹತ್ಯೆ ಮಾಡಿದ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ಕಣ್ಣೆದುರೇ ತನ್ನ ಕಂದನನ್ನು ಕೊಂದ ಕ್ರೂರ ಕ್ಷಣಗಳನ್ನು ಕಂಡೊಡನೆ ಆ ತಾಯಿ ಕುಸಿದುಬಿದ್ದಿದ್ದಾರೆ.
ಹಂತಕ ಶಂಕರ್ ಕೃತ್ಯ ಎಸಗಿದೊಡನೆ ಪರಾರಿ ಯಾಗಿದ್ದಾನೆ. ಮಗುವಿನ ತಂದೆ ಕೃಷ್ಣಮೂರ್ತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಪೈಶಾಚಿಕ ಕೃತ್ಯಕ್ಕೆ ಕಾರಣ: ಕೃಷ್ಣಮೂರ್ತಿ ಮತ್ತು ಹಂತಕ ಶಂಕರ್ ಒಡಹುಟ್ಟಿದ ಸಹೋದರರು. ತಂದೆ-ತಾಯಿ ಜತೆ ಒಟ್ಟಾಗಿದ್ದ ಅವಿಭಕ್ತ ಕುಟುಂಬ. ಇಂಥ ಮನೆಯಲ್ಲಿ ಶಂಕರನಿಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಆದರೆ, ಬಂದವರು ಹೆಣ್ಣು ಕೊಡದೆ ಕೈಕೊಡುತ್ತಿದ್ದರು. ದಿವ್ಯಾಂಗ ಬಾಲಕಿ ಚರ್ವಿತಳಿಂದಲೇ ನನಗೆ ಮದುವೆಯಾಗುತ್ತಿಲ್ಲ ಎಂಬ ಭಾವನೆ ಆತನ ಮನಸ್ಸಿನಲ್ಲಿ ಮೂಡಿತ್ತು.

ಅದೇ ರೀತಿಯ ದಿವ್ಯಾಂಗ ಮಗು ನನಗೂ ಹುಟ್ಟಬಹುದು ಎಂಬ ಕಾರಣಕ್ಕೆ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಮೂಢನಂಬಿಕೆ ಆತನಲ್ಲಿ ಬಲವಾಗಿ ಬೇರೂರತೊಡಗಿತ್ತು. ಚರ್ವಿತಾ ಹುಟ್ಟಿದ ಒಂದು ವರ್ಷದ ನಂತರ ಆ ಮಗುವಿನ ವಿಷಯಕ್ಕಾಗಿ ಅನೇಕ ಸಲ ಶಂಕರ್ ಮನೆಯಲ್ಲಿ ಎಲ್ಲರ ಜತೆ ಜಗಳವಾಡುತ್ತಿದ್ದ. ಮಗು ಬೆಳೆಯುತ್ತಿದ್ದಂತೆಲ್ಲ ಆತನ ಅಸಹನೆಯೂ ಹೆಚ್ಚುತ್ತಲೇ ಹೋಯಿತು.

ಚರ್ವಿತ ಮನೆಯ ಪಾಲಿಗೆ ಅಪಶಕುನ ಎಂದೆಲ್ಲ ನಕಾರಾತ್ಮಕ ಭಾವನೆಗಳನ್ನು ತಲೆಗೆ ತುಂಬಿಕೊಂಡಿದ್ದ. ಈ ಮಗು ಮನೆಯಲ್ಲಿ ಇರಬಾರದು ಎಂದು ಯಾವಾಗಲೂ ಕ್ಯಾತೆ ತೆಗೆಯುತ್ತಿದ್ದ. ಆ ಬಾಲಕಿಯನ್ನು ಕೊಲ್ಲಲು ಮೂರು ಸಲ ವಿಫಲ ಯತ್ನ ನಡೆಸಿದ್ದರಿಂದ ಶಂಕರ್‍ನನ್ನು ಮನೆಯಿಂದ ಹೊರಹಾಕಿದ್ದರು. ತೋಟದ ಶೆಡ್‍ನಲ್ಲಿ ವಾಸವಿದ್ದ. ಮನೆಯವರಿಗೂ ಶಂಕರ್ ದೊಡ್ಡ ತಲೆನೋವಾಗಿದ್ದ. ಕೊನೆಗೆ ಐದು ತಿಂಗಳ ಹಿಂದೆಯಷ್ಟೇ ತಂದೆ-ತಾಯಿ ಮತ್ತೆ ಮನೆಗೆ ಸೇರಿಸಿಕೊಂಡಿದ್ದರು. ಮನೆಗೆ ಮರಳಿದ ಮೇಲೆಯೂ ಆ ಮುಗ್ಧ ಬಾಲಕಿಯ ಹತ್ಯೆಗೆ ಹೊಂಚು ಹಾಕಿಕೊಂಡೇ ಇದ್ದ.

ಪಾಪಿ ಶಂಕರ್ ಹೇಗಾದರೂ ಚರ್ವಿತಳನ್ನು ಕೊಲ್ಲಲೇಬೇಕು ಎಂದು ನಿಶ್ಚಿಯಿಸಿದ್ದ. ಅದಕ್ಕಾಗಿ ನಿರಂತರವಾಗಿ ಹೊಂಚು ಹಾಕಿ ಕಾಯುತ್ತಿದ್ದ. ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಪೈಶಾಚಿಕ ಕೃತ್ಯ ಎಸಗಲು ಸಮಯ ನಿಗದಿ ಮಾಡಿಕೊಂಡಿದ್ದ. ಬಾಲಕಿ ಮನೆಯ ಹತ್ತಿರದ ದೇವಸ್ಥಾನದ ಬಳಿ ಅಕ್ಕಪಕ್ಕದ ಮಕ್ಕಳ ಜತೆ ಅನಂದದಿಂದ ಆಟವಾಡುತ್ತಿದ್ದಾಗ ಅಲ್ಲಿಗೆ ರಾಕ್ಷಸನಂತೆ ನುಗ್ಗಿಬಂದ ಶಂಕರ್, ಮಗುವನ್ನು ಹಿಡಿದು ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ ಚಾಕುವಿನಿಂದ ಕತ್ತು ಕೊಯ್ದಿದ್ದಾನೆ.

ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ಮಗುವನ್ನು ಆ ಪಾಪಿ ಬಲಿ ಪಡೆದು ಓಡಿಹೋದ. ಕಣ್ಣೆದುರೇ ನಡೆದ ಕೃತ್ಯವನ್ನು ಕಂಡ ಶಶಿಕಲಾ ಕುಸಿದುಬಿದ್ದರು. ಅದೆಲ್ಲವನ್ನು ಪ್ರತ್ಯಕ್ಷವಾಗಿ ನೋಡಿದ ಊರಿನ ಜನರೂ ತೀವ್ರ ಆಘಾತಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಧಾವಿಸಿ ಬರುವಷ್ಟರಲ್ಲಿ ಶಂಕರ್ ಆ ಚಾಕುವನ್ನು ಅಲ್ಲೇ ಬಿಸಾಡಿ ಓಡಿಹೋಗಿದ್ದಾನೆ.

ಮಗುವಿನ ತಂದೆ ಕೃಷ್ಣಮೂರ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಿನ್ನ ತಮ್ಮನೇ ನಿನ್ನ ಮಗಳ ಕತ್ತು ಕೊಯ್ದಿದ್ದಾನೆ ಎಂದು ಊರಿನವರೊಬ್ಬರು ಹೋಗಿ ತಿಳಿಸಿದಾಗ ಕೃಷ್ಣಮೂರ್ತಿಯೂ ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಅಸುನೀಗಿತ್ತು.

ಪೋಷಕರಾದ ಕೃಷ್ಣಮೂರ್ತಿ, ಶಶಿಕಲಾ ಆಕ್ರಂಧನ ಮುಗಿಲುಮುಟ್ಟಿದೆ. ಅವರ ಮನೆ ಮತ್ತು ಗ್ರಾಮದಲ್ಲಿ ಮೌನ ಆವರಿಸಿದೆ. ಘಟನೆ ಬಗ್ಗೆ ಮಾಹಿತಿ ನೀಡಿದ ಊರಿನ ಜನರೇ ಮುಗ್ಧ ಮಗುವಿಗಾಗಿ ಕಣ್ಣೀರು ಹಾಕಿದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶಂಕರನ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments