ಎಂಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಅವ್ಯವಹಾರ ಆರೋಪ : 7 ಅಧಿಕಾರಿಗಳಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

MDCC-Bank-Hunasuru
ಹುಣಸೂರು, ಸೆ.5- ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವ್ಯಾಪ್ತಿಯ ತಾಲೂಕಿನ ನಗರ ಮತ್ತು ಬಿಳಿಕೆರೆ, ಎಂಡಿಸಿಸಿ ಬ್ಯಾಂಕಿನ ಶಾಖೆಗಳಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರು ಅಧಿಕಾರಿಗಳನ್ನು ವರ್ಗ ಮಾಡಿ ಏಳು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನಿಖೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತನಿಖೆ ಮುಂದುವರೆದಿದ್ದು , ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ನಿಂಗಣ್ಣಯ್ಯ ತಿಳಿಸಿದ್ದಾರೆ.

ಹುಣಸೂರು ಮತ್ತು ಬಿಳಿಕೆರೆ ಹೋಬಳಿ ಕೇಂದ್ರದ ಸಹಕಾರಿ ಬ್ಯಾಂಕ್ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಮಾಧ್ಯಮಗಳ ವರದಿಯಿಂದ ಬೆಳಕಿಗೆ ಬಂದ ಪರಿಣಾಮ ಎಚ್ಚೆತ್ತುಕೊಂಡ ಉನ್ನತಾಧಿಕಾರಿಗಳು, ಸೋಮವಾರ ಬೆಳಗ್ಗೆಯಿಂದಲೇ ಹುಣಸೂರು ಶಾಖೆಯಲ್ಲಿ ತನಿಖೆ ಆರಂಭಿಸಿ ಹಲವು ದಾಖಲೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅಮಾನತು: ಹಣ ದುರ್ಬಳಕೆ ಸಂಬಂಧಿಸಿದಂತೆ ಹುಣಸೂರು ಶಾಖೆಯ ಅಧಿಕಾರಿ ರಾಮಪ್ಪ ಪೂಜಾರ್ ಸೇರಿದಂತೆ ಮೂರು ಅಧಿಕಾರಿಗಳನ್ನು ವರ್ಗ ಮಾಡಿ ಬಿಳಿಕೆರೆ ಶಾಖೆಯ ಅಧಿಕಾರಿ ನಿರಂಜನ್ ಸೇರಿದಂತೆ ಮೇಲ್ವಿಚಾರಕರಾದ ಎ.ಜೆ.ನವೀನ್, ಕುಮಾರ್, ಜಿ.ಟಿ.ಕೃಷ್ಣ, ಯತೀಶ್‍ಕುಮಾರ್, ನವೀನ್, ದೇವರಾಜ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ತಿಳಿಸಿದರು.

ಐ.ಟಿಗೆ ದೂರು: ರೈತರ ಕೃಷಿ ಸಾಲ ನೀಡಲು ಬಳಸಬೇಕಿದ್ದ ಅನುದಾನವನ್ನು ಸ್ಥಳಿಯ ಅಧಿಕಾರಿಗಳ ತಂಡ ಕೆ.ಸಿ.ಸಿ. ಸಾಲ ರೈತರಿಗೆ ವಿತರಿಸದೆ ಆ ಹಣವನ್ನೇ ತಮ್ಮ ಖಾಸಗಿ ಮನಿ ಎಕ್ಸ್‍ಚೆಂಜ್ ವಹಿವಾಟುಗಳಿಗೆ ಬಂಡವಾಳ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಸಂಬಂಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದರು.

ತನಿಖೆ ಮುಂದುವರೆದಿದೆ: ಈ ಸಂಬಂಧವಾಗಿ ಬ್ಯಾಂಕಿನ ಶಾಖೆಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ಈ ಪ್ರಕರಣದಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂಬುವ ಬಗ್ಗೆ ಶೀಘ್ರವೇ ವರದಿ ಬರಲಿದೆ, ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ತಿಳಿದು ಬರಲಿದ್ದು , ನಂತರ ಮುಂದಿನಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.

ಶಾಸಕರ ಹೇಳಿಕೆ: ಹುಣಸೂರು ಡಿ.ಸಿ.ಸಿ ಬ್ಯಾಂಕ್‍ನಲ್ಲಿ ನಡೆದಿರುವ 27 ಕೋಟಿ ಅವ್ಯವಾರದ ಬಗ್ಗೆ ಅಪೇಕ್ಸ್ ಬ್ಯಾಂಕ್ ಮತ್ತು ಮೈಸೂರಿನ ಎಂಡಿಸಿಸಿ ಬ್ಯಾಂಕ್ ಅದಿಕಾರಿಗಳ ಜೊತೆ ಮಾತನಾಡಿ, ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಶಾಸಕ ಹೆಚ್. ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮ್ಯಾನೆಜರ್ ರಾಮಪ್ಪ ಪೂಜಾರ್ ಮತ್ತು ಸಿಬ್ಬಂದಿಗಳು ಸೇರಿ ಸಾರ್ವಜನಿಕ ಹಣವನ್ನು ವ್ಯೆಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡು ಅರ್.ಬಿ.ಐ ನಿಯಮಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಈ ಅಕ್ರಮ ನಡೆಸಿರುವ ರಾಮಪ್ಪ ಪೂಜಾರ್ ಮತ್ತು ಮೂರು ಜನ ಸಿಬ್ಬಂದಿಗಳನ್ನು ವರ್ಗ ಮಾಡಿ ಉಳಿದ ಏಳು ಜನ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ತನಿಖೆಗೆ ಒಳಪಡಿಸಿದ್ದಾರೆ. ಈ ತನಿಖೆಗಾಗಿ ಎರಡು ತಂಡಗಳನ್ನು ನೇಮಿಸಿದ್ದು ಇವರ ಮೇಲೆ ತೀವ್ರಗತಿಯ ತನಿಖೆ ನಡೆಯುತ್ತಿದೆ ಎಂದರು.

Facebook Comments

Sri Raghav

Admin