ಜಿಕೆವಿಕೆಯಲ್ಲಿ ಅ.24ರಿಂದ ಕೃಷಿ ಮೇಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಈ ಬಾರಿಯ ಕೃಷಿ ಮೇಳದಲ್ಲಿ ಏಳು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುವುದು. ನಿಖರ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಗಾಂಧಿ ಕೃಷಿ ಮಹಾವಿದ್ಯಾಲಯದ ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 24 ರಿಂದ 27ರವರೆಗೆ ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ಘೋಷವಾಕ್ಯದಡಿ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ 2019ಆಯೋಜಿಸಲಾಗಿದ್ದು, ರೈತರಿಂದ ರೈತರಿಗಾಗಿ ಏರ್ಪಡಿಸುವ ಸಾಂಪ್ರದಾಯಿಕ ಸಂಭ್ರಮಾಚರಣೆ ಇದಾಗಿದೆ ಎಂದು ಹೇಳಿದರು.

ಏಳು ಹೊಸ ತಳಿಗಳನ್ನು ಬಿಡುಗಡೆ ಮಾಡಿ ಅದರಲ್ಲಿ ರೈತರಿಗೆ ಸ್ವಲ್ಪ ಬೀಜಗಳನ್ನೂ ನೀಡಲಾಗುವುದು, 18 ಹೊಸ ತಂತ್ರಜ್ಞಾನ ಬಿಡುಗಡೆ ಮಾಡುವುದಲ್ಲದೆ, ಮಳೆ ನೀರು ಶೇಖರಣೆ ಮಾಡಿ, ಹೂ, ತರಕಾರಿ, ಧಾನ್ಯ ಉತ್ಪಾದನೆಯಲ್ಲಿ ಹೆಚ್ಚು ಲಾಭ ಪಡೆಯುವ ಕುರಿತು ಮತ್ತು ನಾವು ಹಾಕುವ ಪೋಷಕಾಂಶಗಳ ಸದ್ಬಳಕೆ, ಮಣ್ಣಿನ ಗುಣಮಟ್ಟ, ಪೋಷಕಾಂಶಗಳ ಹೆಚ್ಚಿಸುವ ಕುರಿತು ಪ್ರಾತ್ಯಕ್ಷಿಕೆ ಸಹಿತ ರೈತರಿಗೆ ತಿಳಿಸಿಕೊಡಲಾಗುವುದು ಎಂದು ಹೇಳಿದರು.

ಹೊಸ ತಂತ್ರಜ್ಞಾನ ಆಹಾರ ಧಾನ್ಯ ಉತ್ಪಾದನೆಗೂ ವಿಸ್ತರಣೆ ಮಾಡಲಾಗುವುದು, ರಾಗಿಗೂ ನೀರಿನ ಸದ್ಬಳಕೆ ಜೊತೆಗೆ ತಂತ್ರಜ್ಞಾನ ಅಳವಡಿಕೆ ಕುರಿತು ಜಿ.ಕೆ.ವಿ.ಕೆ ಹಾಗೂ ಸರ್ಕಾರಿ ಸಂಸ್ಥೆ ಜೊತೆಗೆ ಖಾಸಗಿ ಸಂಸ್ಥೆಗಳು ಜೊತೆಗೂಡಿ ಖಾಸಗಿ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಪ್ರದರ್ಶಿಸಲಾಗುವುದು. ಸೌರ ಶಕ್ತಿ ಬಳಕೆಯಿಂದ ನೀರು ಉಪಯೋಗ, ಹನಿ ನೀರಾವರಿ ಮೂಲಕ ರಸ ಗೊಬ್ಬರ ಸಿಂಪರಣೆ ಅತಿ ವೃಷ್ಠಿ, ಅನಾವೃಷ್ಟಿ ಸಮಯದಲ್ಲಿ ರೈತರಿಗೆ ಬೆಳೆಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುವುದು.

ರೈತರಿಂದ ಗ್ರಾಹಕರಿಗೆ ಮಾರುಕಟ್ಟೆ ಕಲ್ಪಿಸಲು ಉತ್ತಮ ಧಾರಣೆ, ಕೊಯ್ಲಿನ ನಂತರದ ಸಂರಕ್ಷಣಾ ವಿಧಾನ, ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳದ ಬಗ್ಗೆ ತಿಳಿಸಿಕೊಡಲಾಗುವುದು. ಆಹಾರ ಧಾನ್ಯಗಳನ್ನು ಆರೋಗ್ಯಕರ ಸಂರಕ್ಷಣೆಯಿಂದ ಗ್ರಾಹಕರ ಆರೋಗ್ಯದಲ್ಲೂ ಉತ್ತಮ ಸುಧಾರಣೆಯಾಗಲಿದೆ. ಪಶುಪಾಲನೆ, ಹೈನುಗಾರಿಕೆ, ಸುಧಾರಿತ ಯಂತ್ರೋಪಕರಣಗಳು, ಸುಧಾರಿತ ಬೇಸಾಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು.

ಶೇ.85ರಷ್ಟು ಸಣ್ಣ ರೈತರಿಗಾಗಿ ಏರ್ಪಡಿಸುವ ಸಾಂಪ್ರದಾಯಿಕ ಯಂತ್ರೋಪಕರಣಗಳು, ಬೇಸಾಯ ಪರಿಕರಗಳ 150ಕ್ಕೂ ಹೆಚ್ಚು ಮಳಿಗೆಗಳ ಸ್ಥಾಪನೆ ಮಾಡಲಾಗುವುದು. ಹೈನುಗಾರಿಕೆ ಯಿಂದ ಒಣ ಮತ್ತು ಅನುಪಯುಕ್ತ ಭೂಮಿಗಳ ಸದ್ಬಳಕೆ, ಹಲವು ಸಂಶೊಧನಾ ಸಂಸ್ಥೆಗಳು, ಅನ್ವೇಷಣೆ ಗಳು, ವಿಜ್ಞಾನಿಗಳಿಂದ ರೈತರಿಗೆ ಚರ್ಚಾಸ್ಪರ್ಧೆ ಆಯೋಜಿಸಿ ಉತ್ತಮ ರೈತರಿಗೆ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಗುವುದು. ಯುವ ಪ್ರತಿಭೆಗಳಿಗೆ, ಯುವ ಮಹಿಳೆ ಮತ್ತು ಪುರುಷರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರಶಸ್ತಿ ನೀಡಲಾಗುತ್ತದೆ.

ಕೃಷಿ ಮೇಳದ ಬಗ್ಗೆ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ. ಕೃಷಿ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಊಟ, ವಸತಿ, ವೈದ್ಯಕೀಯ, ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮೇಳಕ್ಕೆ ಸಂಪೂರ್ಣ ಒದಗಿಸಲಾಗಿದೆ. 300 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 30 ಸೆಕ್ಯೂರಿಟಿ ಗಾರ್ಡ್‍ಗಳು, 350 ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಉದ್ಘಾಟನೆ: ಅ.24 ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯ ಮಂತ್ರಿ ಹಾಗೂ ಕೃಷಿ ಸಚಿವರಾದ ಲಕ್ಷ್ಮಣ ಸವದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಕೃಷ್ಣಭೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ.ಎಸ್.ರಾಜೇಂದ್ರಪ್ರಸಾದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು, ಸಂಶೋಧನಾ ನಿರ್ದೇಶಕ ಡಾ.ವೈ.ಷಡಕ್ಷರಿ ಉಪಸ್ಥಿತರಿದ್ದರು.

Facebook Comments