ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.21- ಕಿಲ್ಲರ್ ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವ ಸಂದರ್ಭದಲ್ಲೇ ರೋಗಿಗಳಿಗೆ ವರದಾನವಾಗಬಲ್ಲ ಮಾತ್ರೆಯನ್ನು ಭಾರತದ ಗ್ಲೆನ್‍ಮಾರ್ಕ್ ಔಷಧಿ ತಯಾರಿಕೆ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಫ್ಯಾಬಿಫ್ಲೂ ಬ್ರಾಂಡ್ ನೇಮ್‍ನಲ್ಲಿ ನಿನ್ನೆ ಸಂಜೆಯಷ್ಟೇ ಬಿಡುಗಡೆ ಮಾಡಿರುವ ಈ ಮಾತ್ರೆ ಹೆಸರು ಫವಿಪಿರವಿರ್. ಲಘು ಮತ್ತು ಸಾಧಾರಣ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ ಕೊರೊನಾ ರೋಗಿಗಳಿಗೆ ಈ ಮಾತ್ರೆ ಅತ್ಯಂತ ಪರಿಣಾಮಕಾರಿ ಎಂದು ಸಂಸ್ಥೆ ಬಣ್ಣಿಸಿದೆ.

ಈ ಮಾತ್ರೆ ಬೆಲೆ 103ರೂ.ಗಳು. ಲಘು ಮತ್ತು ಸಾಧಾರಣ ಸೋಂಕು ಇರುವ ರೋಗಿಗಳಿಗೆ ಇದು ಮ್ಯಾಜಿಕ್ ಬುಲೆಟ್ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ, ತೀವ್ರ ಮತ್ತು ಗಂಭೀರ ಸ್ವರೂಪ ಸೋಂಕಿತರಲ್ಲಿ ವೈರಾಣು ಹೊರೆಯನ್ನು ಕಡಿಮೆ ಮಾಡುವಲ್ಲಿ ಈ ಮಾತ್ರೆ ಸಹಕಾರಿ ಎಂದು ಸಂಸ್ಥೆಯ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಮಾತ್ರೆ ರೂಪದ ಔಷಧಿ ಬಿಡುಗಡೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದ್ದು, ಇಂದಿನಿಂದ ಈ ಮಾತ್ರೆಗಳು ದೇಶಾದ್ಯಂತ ಲಭಿಸುತ್ತದೆ.

ಈ ಮಾತ್ರೆಗಳು ಮಂದ ಸ್ವರೂಪದ ರೋಗಿಗಳಿಗೆ ಪರಿಣಾಮಕಾರಿಯಾಗಲಿದೆ ಎಂಬುದು ಈಗಾಗಲೇ ದೃಢಪಟ್ಟಿದ್ದು, ಈ ಮಾತ್ರೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮೇಲ್ದರ್ಜೆಗೇರಿಸಲು ಸಂಶೋಧನೆ ಮುಂದುವರೆದಿದ್ದು, ಮುಂದಿನ ವಾರ ಪೂರಕ ಫಲಿತಾಂಶ ಲಭಿಸುವ ನಿರೀಕ್ಷೆ ಇದೆ.

Facebook Comments