ಜಾಗತಿಕ ಅನ್ವೇಷಣೆ ಪಟ್ಟಿಯಲ್ಲಿ ಭಾರತಕ್ಕೆ 48ನೇ ಸ್ಥಾನ, ವಿಜ್ಞಾನ-ತಂತ್ರಜ್ಞನದಲ್ಲಿ ಬೆಂಗಳೂರಿಗೆ 100ನೇ ರ‍್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.3- ಭಾರತದ ಅನ್ವೇಷಣೆ ಮತ್ತು ವಿಜ್ಞಾನ-ತಂತ್ರಜ್ಞನ ಕೀರ್ತಿಯ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಜಾಗತಿಕ ಅನ್ವೇಷಣೆ ಪಟ್ಟಿ-2020ರಲ್ಲಿ ಭಾರತಕ್ಕೆ 48ನೆ ಸ್ಥಾನ ಲಭಿಸಿದೆ. ಗ್ಲೋಬಲ್ ಇನ್ನೋವೇಷನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿರುವ ವಿಶ್ವದ 50 ಅಗ್ರಮಾನ್ಯ ದೇಶಗಳಲ್ಲಿ ಭಾರತ ಇದೇ ಮೊದಲ ಬಾರಿ ಸೇರ್ಪಡೆಯಾಗಿರುವುದು ಮತ್ತೊಂದು ಹೆಗ್ಗಳಿಕೆ.

ಅಲ್ಲದೆ, ಉದ್ಯಾನನಗರಿ ಬೆಂಗಳೂರು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞನ ತಾಣದಲ್ಲಿ ಜಂಟಿಯಾಗಿ 100ನೆ ರ್ಯಾಂಕ್ ಗಳಿಸಿರುವುದು ದೇಶಕ್ಕೆ ಮಗದೊಂದು ಹೆಮ್ಮೆಯ ಸಂಗತಿಯಾಗಿದೆ.

ಕೇಂದ್ರ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಜಾಗತಿಕ ಅನ್ವೇಷಣೆ ಪಟ್ಟಿಯಲ್ಲಿ ಭಾರತ 48ನೆ ಶ್ರೇಣಿಯಲ್ಲಿದೆ. 50 ಅಗ್ರಮಾನ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಈ ಶ್ರೇಯ ಲಭಿಸಿರುವುದು ಇದೇ ಮೊದಲು.

ಭಾರತ 50 ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಹಲವು ವರ್ಷಗಳಿಂದ ಶ್ರಮಿಸಿತ್ತು. ಕಳದ ವರ್ಷ 52ನೆ ಶ್ರೇಣಿಯಲ್ಲಿತ್ತು. ಈಗ ನಾಲ್ಕು ಸ್ಥಾನಗಳಿಗೆ ಜಿಗಿದಿದ್ದು, ಟಾಪ್ 50ರಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇದೇ ವೇಳೆ ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳು ಸೈನ್ಸ್ ಅಂಡ್ ಟೆಕ್ನಾಲಜಿ ಹಾಟ್‍ಸ್ಪಾಟ್ ವಿಭಾಗದಲ್ಲಿ 100ನೆ ರ್ಯಾಂಕ್ ಗಳಿಸಿರುವುದು ಸಹ ಗಮನಾರ್ಹ ಸಂಗತಿಯಾಗಿದೆ.

ಜಾಗತಿಕ ಅನ್ವೇಷಣಾ ಪಟ್ಟಿಯಲ್ಲಿ ಸ್ವಿಟ್ಜರ್‍ಲೆಂಡ್, ಸ್ವೀಡನ್, ಅಮೆರಿಕ, ಇಂಗ್ಲೆಂಡ್ ಹಾಗೂ ನೆದರ್‍ಲೆಂಡ್ಸ್ ಅನುಕ್ರಮವಾಗಿ ಟಾಪ್ ಫೈವ್ ಸ್ಥಾನ ಪಡೆದಿವೆ. ಏಷ್ಯಾದ ಪ್ರಬಲ ಆರ್ಥಿಕ ದೇಶಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಟಾಪ್ ಟೆನ್‍ನಲ್ಲಿ ಸ್ಥಾನ ಪಡೆದಿದ್ದರೆ, ಸಿಂಗಪುರ್ ಎಂಟನೆ ಶ್ರೇಣಿಯಲ್ಲಿದೆ.

Facebook Comments