ಕೆರೆಕುಂಟೆ-ರಾಜಕಾಲುವೆ ಒತ್ತುವರಿ ವಾರದೊಳಗೆ ಸರ್ವೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಕೆರೆಕುಂಟೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ವೆ ನಡೆಸಿ ವಾರದ ಒಳಗಾಗಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರು ಸೂಚನೆ ನೀಡಿದ್ದಾರೆ. ಕನಕಪುರ ರಸ್ತೆಯ ಕೋಣನಕುಂಟೆ ಅಡಿಯಾರ್ ಆನಂದಭವನ ಸಮೀಪ ದೊಡ್ಡಕಲ್ಲಸಂದ್ರ ಸರ್ವೆ ನಂ.18,19,20 ಹಾಗೂ 12ರಲ್ಲಿ ಸುಮಾರು 29 ಎಕರೆ ಸರ್ಕಾರಿ ಭೂಮಿ ಹಾಗೂ 4 ಎಕರೆ ಕುಂಟೆ(ಕೆರೆ) ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ದೂರುಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ದಿಢೀರ್ ದಾಳಿನಡೆಸಿದ ದಕ್ಷಿಣ ವಲಯ ಉಪವಿಭಾಗಾಧಿಕಾರಿ ಡಾ.ಎಂ.ಜಿ.ಶಿವಣ್ಣ , ತಹಸೀಲ್ದಾರ್ ಶಿವಪ್ಪ ಲಮಾಣಿ ಅವರು ಸ್ಥಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಅಕ್ರಮ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಜಾಗದಲ್ಲಿ 43 ಎಕರೆಯನ್ನು ಸರ್ಕಾರ ಬಿಡಿಎ ಮೂಲಕ ಸ್ವಾಧೀನ ಪಡಿಸಿಕೊಂಡು ಬ್ಯಾಂಕ್ ಅಧಿಕಾರಿಗಳ ಸಂಘದ ವಸತಿ ಉದ್ದೇಶಕ್ಕೆ ನೀಡಿತ್ತು. ಅಲ್ಲಿ ನಿವೇಶನಗಳು ನಿರ್ಮಾಣಗೊಂಡಿದ್ದು, ಹಲವಾರು ಕಟ್ಟಡಗಳನ್ನು ಕಟ್ಟಲಾಗಿದೆ. ಬಹಳಷ್ಟು ಮಂದಿ ವಾಸವಿದ್ದಾರೆ.

ಈ ಭಾಗದಲ್ಲಿ 29 ಎಕರೆ ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿಜಯ್‍ಶಂಕರ್ ಮತ್ತು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರು ಸರ್ವೆ ಮಾಡಿ ಬೇಲಿ ಹಾಕಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯ ಬೋರ್ಡ್ ಹಾಕಿದ್ದರು. ಕಳೆದ ಎರಡು ವರ್ಷಗಳಿಂದ ಈ ಜಾಗದಲ್ಲಿ ಜಿಲ್ಲಾಡಳಿತ ಹಾಕಿದ್ದ ಬೋರ್ಡ್‍ಅನ್ನು ಕಿತ್ತು ಹಾಕಲಾಗಿದ್ದು, ಒತ್ತುವರಿ ಮಾಡಿಕೊಂಡು ನಿವೇಶನ ಅಭವೃದ್ಧಿಪಡಿಸಲಾಗಿದೆ. ನಿವೇಶನ ಮಾರಾಟ ಕೂಡ ಹಾಗಿದ್ದು, ನಾಲ್ಕು ಮಂದಿ ಮನೆಯನ್ನೂ ಕಟ್ಟಿದ್ದಾರೆ.

ಇಂದು ಬೆಳಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ವೇಳೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯ ನಿವಾಸಿಗಳು ಆತಂಕದಿಂದ ಬಂದು ಅಧಿಕಾರಿಗಳ ಬಳಿ ವಿಚಾರಿಸಿದರು. ಬಹಳಷ್ಟು ಮಂದಿಗೆ ತಾವು ಖರೀದಿಸಿರುವ ನಿವೇಶನ ಕೆರೆ, ಕುಂಟೆ, ರಾಜಕಾಲುವೆಗೆ ಸೇರಿದ ಪ್ರದೇಶ ಎಂಬ ಮಾಹಿತಿಯೇ ಇಲ್ಲ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಾಜಕಾಲುವೆಯಲ್ಲಿ ನೀರು ಹರಿಯದೆ ಮನೆಗಳಿಗೆ ನುಗ್ಗಿತ್ತು. ಈ ಸಂಬಂಧಪಟ್ಟಂತೆ ಕೆಲವು ವಕೀಲರು ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಜಿಲ್ಲಾಧಿಕಾರಿಯವರು ಸರ್ವೆ ನಡೆಸಿ ವಾರದೊಳಗಾಗಿ ವರದಿ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ಅಭಿವೃದ್ಧಿ ಪಡಿಸುವವರೆಗೂ ಸ್ಥಳೀಯ ಕಂದಾಯ ಅಧಿಕಾರಿಗಳು ಗಮನಿಸದೇ ಇದ್ದದ್ದು ಯಾವ ಕಾರಣಕ್ಕೆ ಎಂದು ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಬೋರ್ಡ್ ಕಿತ್ತು ಹಾಕಿ ನಿವೇಶನ ಅಭಿವೃದ್ಧಿ ಮಾಡಿ ಮನೆ ಕಟ್ಟುವವರೆಗೂ ಕಂದಾಯ ನಿರೀಕ್ಷಕರು ಏನು ಮಾಡುತ್ತಿದ್ದರು ? ಜಿಲ್ಲಾಡಳಿತದ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಅಕ್ರಮಗಳಿಂದ ಎಷ್ಟು ಹಣ ಸಂಪಾದನೆ ಮಾಡಿದ್ದೀರಾ ಎಂದು ಕೂಡ ಕೆಳ ಹಂತದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ನಂತರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ತಪ್ಪು ಮಾಡಿದವರನ್ನು ಅಮಾನತುಗೊಳಿಸಿ ಎಂದು ಉಪ ವಿಭಾಗಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Facebook Comments