ಪಾಪಿಕೊಂಡಲದೋಣಿ ದುರಂತ : ಈವರೆಗೆ 16 ಶವ ಪತ್ತೆ,  21 ಮಂದಿ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ, ಸೆ.16- ಪಾಪಿಕೊಂಡಲ ಎಂಬ ಪ್ರವಾಸಿತಾಣದ ಗೋದಾವರಿ ನದಿಯಲ್ಲಿ ನಿನ್ನೆ ಸಂಭವಿಸಿದ ದೋಣಿ ದುರಂತದಲ್ಲಿ ಜಲಸಮಾಧಿಯಾದವರಲ್ಲಿ ಈವರೆಗೆ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ.  ಈ ದುರಂತದಿಂದ ಈವರೆಗೆ 21ಜನರನ್ನು ರಕ್ಷಿಸಲಾಗಿದ್ದು, ಕಣ್ಮರೆಯಾದವರಿಗೆ ನದಿಯಲ್ಲಿ ತೀವ್ರ ಶೋಧ ಮುಂದುವರೆದಿದ್ದು, ಮತ್ತಷ್ಟು ಶವಗಳು ಪತ್ತೆಯಾಗುವ ಸಾಧ್ಯತೆಯಿದೆ.

73 ಜನರನ್ನು ಹೊತ್ತು ಗೋದಾವರಿ ನದಿಯಲ್ಲಿ ಸಾಗುತ್ತಿದ್ದ, ಶ್ರೀ ವಸಿಷ್ಠ ಎಂಬ ದೋಣಿ ನಿನ್ನೆ ಬೆಳಗ್ಗೆ 10.30ರಲ್ಲಿ ಮುಳುಗಿತ್ತು. ನಿನ್ನೆ ರಾತ್ರಿವರೆಗೆ 8 ಮೃತದೇಹಗಳು ಪತ್ತೆಯಾಗಿದ್ದವು. ಇಂದು ಮುಂಜಾನೆಯಿಂದ ನಡೆದ ಶೋಧ ಕಾರ್ಯಾಚರಣೆಯಲ್ಲಿ ಒಂದು ಮಗು ಸೇರಿದಂತೆ 8 ಶವಗಳನ್ನು ಹೊರತೆಗೆಯಲಾಗಿದೆ.

ಈವರೆಗೆ ರಕ್ಷಿಸಲ್ಪಟ್ಟ 21 ಪ್ರವಾಸಿಗರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೂ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಸಾಧ್ಯತೆಯಿದ್ದು, ಇವರಲ್ಲಿ ಕೆಲವರು ಈಜಿ ದಡ ಸೇರಿರುವ ಸಾಧ್ಯತೆಯಿದ್ದು, ಇನ್ನೂ ಕೆಲವರು ನೀರುಪಾಲಾಗಿರುವ ಆತಂಕವಿದೆ. ಎರಡು ಅಂತಸ್ತಿನ ದೋಣಿಯಲ್ಲಿ 62 ಪ್ರವಾಸಿಗರು ಮತ್ತು 11ಮಂದಿ ಸಿಬ್ಭಂದಿ ಇದ್ದರು.

ನಿನ್ನೆಯಿಂದ ಪಾಪಿಕೊಂಡಲು ಪ್ರದೇಶದಲ್ಲಿ ದೋಣಿಗಳ ಮೂಲಕ ಮುಳುಗುತಜ್ಞರು ಮತ್ತು ರಕ್ಷಣಾಕಾರ್ಯಕರ್ತರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮೃತಪಟ್ಟವರು ಕುಟುಂಬಗಳಿಗೆ ತಲಾ 10ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈಗಾಗಲೆ ತಿಳಿಸಿದ್ದಾರೆ.

Facebook Comments