ಪೊಲೀಸ್ ಸಿಬ್ಬಂದಿಯೊಬ್ಬರ ಮನೆಯಲ್ಲಿದ್ದ 2 ಕೆಜಿ ಚಿನ್ನ ಕಳ್ಳತನ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.1- ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬರ ಮನೆಯಲ್ಲಿ 2ಕೆಜಿ ಚಿನ್ನಾಭರಣ ನಿಗೂಢವಾಗಿ ಕಳ್ಳತನವಾಗಿದೆ. ನಗರದ ಸರಸ್ವತಿಪುರಂನ 5ನೆ ಮುಖ್ಯರಸ್ತೆ ನಿವಾಸಿ ವಿಜಿಕುಮಾರ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ.

ವಿಜಿಕುಮಾರ್ ಬ್ಯುಸಿನೆಸ್ ಮ್ಯಾನ್. ಇವರ ಪತ್ನಿ ಮೈಸೂರು ವಿಭಾಗದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಇವರ ಮನೆಯಲ್ಲಿ 2 ಕೆಜಿ ಚಿನ್ನಾಭರಣ ಇಡಲಾಗಿದ್ದು, ಒಂದೂವರೆ ಕೆಜಿ ವಿಜಿಕುಮಾರ್ ಅವರಿಗೆ ಸೇರಿದ್ದು, ಇನ್ನುಳಿದ ಅರ್ಧ ಕೆಜಿ ಚಿನ್ನ ಅವರ ಸಂಬಂಧಿಗೆ ಸೇರಿದ್ದಾಗಿದೆ.

ಸಂಬಂಧಿ ಮನೆ ರಿಪೇರಿ ಮಾಡಿಸುತ್ತಿದ್ದರಿಂದ ಇವರ ಮನೆಯಲ್ಲಿ ಅರ್ಧ ಕೆಜಿ ಚಿನ್ನ ಇಟ್ಟಿದ್ದರು. ಇದೀಗ ಇವರ ಮನೆಯಲ್ಲಿ 2 ಕೆಜಿ ಚಿನ್ನ ಕಳ್ಳತನವಾಗಿರುವುದು ನಿಗೂಢವಾಗಿದೆ.

ಮನೆ ಬಾಗಿಲು ಒಡೆದಿಲ್ಲ, ನಕಲಿ ಕೀ ಬಳಸಿಲ್ಲ, ಆದರೂ ಆಭರಣ ಕಳ್ಳತನವಾಗಿರುವುದು ನಿಗೂಢವಾಗಿದೆ. ಆ.17ರಂದು ವಿಜಿಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಇದ್ದುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಇವರ ತಾಯಿಗೂ ಕೊರೊನಾ ಇದ್ದುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಈ ನಡುವೆ ಇವರ ಮನೆಯಲ್ಲಿದ್ದ ಆಭರಣ ಕಾಣೆಯಾಗಿದೆ. ಈ ಬಗ್ಗೆ ಸರಸ್ವತಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.

ಹೊರಗಿನಿಂದ ಬಂದು ಕಳ್ಳತನ ನಡೆಸಿರುವ ಸಾಧ್ಯತೆ ಕಡಿಮೆ ಇದೆ. ಮನೆ ಒಳಗಿದ್ದವರಿಂದಲೇ ಕಳ್ಳತನವಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸರಸ್ವತಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

Facebook Comments