ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.23- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಸಾವನ್ನಪ್ಪಿದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಕಳೆದ ಗುರುವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ನೌಶಿನ್ ಹಾಗೂ ಜಲೀಲ್ ಎಂಬುವರು ಸಾವನ್ನಪ್ಪಿದ್ದರು.

ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಮುಸ್ಲಿಂ ಸಂಘಟನೆಗಳು ಕೂಡ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ ಗೋಲಿಬಾರ್ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲು ತೀರ್ಮಾನಿಸಿದ್ದು, ಬೆಂಗಳೂರಿನಲ್ಲಿ ಯಡಿಯೂರಪ್ಪ ಇದನ್ನು ಖಚಿತಪಡಿಸಿದ್ದಾರೆ.

ಈ ಮೊದಲು ಪ್ರಕರಣವನ್ನು ವಿಶೇಷ ತನಿಖಾದಳ(ಎಸ್‍ಐಟಿ) ಮೂಲಕ ತನಿಖೆ ನಡೆಸಲು ಬಿಎಸ್‍ವೈ ತೀರ್ಮಾನಿಸಿದ್ದರು. ಆದರೆ ಇದನ್ನು ಪ್ರತಿಪಕ್ಷಗಳು ಹಾಗೂ ಮುಸ್ಲಿಂ ಸಂಘಟನೆಗಳು ಒಪ್ಪುವ ಸಾಧ್ಯತೆ ತೀರಾ ಕಡಿಮೆ ಎಂಬ ಕಾರಣಕ್ಕಾಗಿ ಸಿಐಡಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ.  ಈಗಾಗಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಂತರವೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ.

ಎಸ್‍ಐಟಿಗೆ ವಹಿಸಿದರೆ ಹಿರಿಯ ಐಪಿಎಸ್ ಅಧಿಕಾರಿಯಿಂದ ತನಿಖೆ ನಡೆಸಬೇಕಾಗುತ್ತದೆ. ಆ ಅಧಿಕಾರಿಯು ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಬಹುದೆಂಬ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.

ನ್ಯಾಯಾಂಗ ತನಿಖೆ ಬೇಡ: ಗೋಲಿಬಾರ್ ನಡೆದ ನಂತರವೇ ಯಡಿಯೂರಪ್ಪ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಕೇಂದ್ರ ವರಿಷ್ಠರು ಒಪ್ಪಲಿಲ್ಲ ಎನ್ನಲಾಗಿದೆ.  ನ್ಯಾಯಾಂಗ ತನಿಖೆಗೆ ವಹಿಸಿದರೆ ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡಿದಂತಾಗುತ್ತದೆ. ಹೀಗಾಗಿ ಸಿಐಡಿ ಮೂಲಕವೇ ತನಿಖೆ ನಡೆಸಬೇಕೆಂದು ಬಿಎಸ್‍ವೈಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.  ನಿನ್ನೆಯಷ್ಟೇ ಗಲಭೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರವನ್ನು ಘೋಷಣೆ ಮಾಡಿತ್ತು.

Facebook Comments