ಕಾರ್ಮಿಕರಿಗೆ ಗುಡ್ ನ್ಯೂಸ್ : ವಸತಿ ಯೋಜನೆ ಹಣವನ್ನು 2 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

venkataramanappa
ಬೆಂಗಳೂರು, ಜು.20- ಕಾರ್ಮಿಕರ ವಸತಿ ಯೋಜನೆ ಹಣವನ್ನು ಎರಡು ಲಕ್ಷದಿಂದ ಐದು ಲಕ್ಷ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೇಶನ ಹೊಂದಿರುವ ಕಾರ್ಮಿಕರಿಗೆ ಈ ಸೌಲಭ್ಯ ಮೊದಲ ಹಂತದಲ್ಲಿ ದೊರೆಯಲಿದೆ. ಕಾರ್ಮಿಕ ಇಲಾಖೆಯಿಂದ ಹಣ ಹಾಗೂ ಫಲಾನುಭವಿಗಳ ಪಟ್ಟಿಯನ್ನು ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ನೀಡಲಾಗುವುದು, ಕಾರ್ಮಿಕರು ಕಟ್ಟಿಕೊಳ್ಳುವ ಮನೆಯ ಪ್ರಗತಿಗೆ ಅನುಗುಣವಾಗಿ ನಿಗಮದಿಂದ ಹಣ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಜು.24ರಂದು ರಾಜ್ಯದ ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಪರೆನ್ಷ್ ಸಂವಾದ ನಡೆಸಲಾಗುವುದು ಎಂದರು.

ವಿಭಾಗ ಮಟ್ಟದ ಸಭೆಗಳನ್ನು ನಡೆಸಿ ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕರ ನೋಂದಣಿ ಸಮೀಕ್ಷೆ ನಡೆಸಲು ಸೂಚಿಸಲಾಗುವುದು. ಪ್ರತಿಯೊಬ್ಬ ಕಾರ್ಮಿಕರಿಗೂ ಗುರುತಿನ ಚೀಟಿ ನೀಡಿ ಖಾಯಂ ಕಾರ್ಮಿಕರೆಂದು ಗುರುತಿಸಲಾಗುವುದು. ಇದು ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಶಿಕ್ಷಣ, ಮದುವೆ ಸೇರಿದಂತೆ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಪ್ರಯೋಗಾಲಯ ಸ್ಥಾಪನೆ: ಕಾರ್ಮಿಕರ ವಿಮಾ ಆಸ್ಪತ್ರೆ ಅಡಿಯಲ್ಲಿ ಬರುವ ಡಿಸ್ಪೆನ್ಷರಿಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೇ ಅನುಮೋದನೆಯಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ 112 ಇಎಸ್‍ಐ ಡಿಸ್ಪೆನ್ಷರಿಗಳಿದ್ದು, ಅಲ್ಲಿ ಮಧುಮೇಹ, ಮೂತ್ರ ಪರೀಕ್ಷೆ ಸೇರಿದಂತೆ ಸಣ್ಣ ಪ್ರಮಾಣದ ಪರೀಕ್ಷೆಗಳನ್ನು ಮಾಡಲು ಅನುಕೂಲವಾಗುವಂತೆ ಪ್ರಯೋಗಾಲಯ ಸ್ಥಾಪನೆ ಮಾಡುವ ಉದ್ದೇಶವಿದೆ ಎಂದರು.

Facebook Comments

Sri Raghav

Admin