ಬೆಂಗಳೂರಿಗೆ ಗುಡ್ ಬೈ : ಊರುಗಳತ್ತ ಹೊರಟ ಜನ, ಕಾರ್ಮಿಕರ ಸೋಗಲ್ಲಿ ಬಂದ ಐಟಿಬಿಟಿ ನೌಕರರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 2- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಜನಜಂಗುಳಿ ನೆರೆದಿತ್ತು. ಲಾಕ್‍ಡೌನ್ ನಿಯಮ ಸಡಿಲಗೊಳಿಸಿ ಕಾರ್ಮಿಕರನ್ನು ಊರುಗಳಿಗೆ ತೆರಳಲು ಅನುಮತಿ ನೀಡುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ನಿನ್ನೆ ರಾತ್ರಿಯಿಂದಲೇ ಮೆಜೆಸ್ಟಿಕ್ ಬಳಿ ಜಮಾಯಿಸಿದ್ದು ಇಂದು ಮಧ್ಯಾಹ್ನವಾದರೂ ಊರಿಗೆ ಹೋಗಲು ಪರದಾಡುತ್ತಿದ್ದುದು ಕಂಡು ಬಂತು.

ಕಾರ್ಮಿಕರ ನೆಪದಲ್ಲಿ ಐಟಿ-ಬಿಟಿ ನೌಕರರು, ಬೇರೆ ಬೇರೆ ಉದ್ಯೋಗಿಗಳು ಕೂಡ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್‍ಗಳಲ್ಲಿ ಟಿಕೆಟ್ ಪಡೆಯಲು ತಾ ಮುಂದು, ನಾ ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ 38 ದಿನಗಳಿಂದ ಲಾಕ್‍ಡೌನ್ ಘೋಷಣೆಯಾದ ಪರಿಣಾಮ ಕಾರ್ಮಿಕರು ಸಂಪೂರ್ಣ ಅತಂತ್ರರಾಗಿದ್ದರು. ಇತ್ತ ಕೆಲಸವೂ ಇಲ್ಲದೆ ಅತ್ತ ತಮ್ಮ ಊರುಗಳಿಗೆ ತೆರಳಲು ಸಾಧ್ಯವೂ ಆಗದೆ ಪರಿತಪಿಸುತ್ತಿದ್ದರು.

ಕೆಲವರು ಸರ್ಕಾರದ ಆಶ್ರಯ ತಾಣಗಳಲ್ಲಿ ಅಂದರೆ ಕಲ್ಯಾಣ ಮಂಟಪ, ವಿವಿಧ ಸಮುದಾಯ ಭವನಗಳಲ್ಲಿ ನೆಲೆ ಕಂಡು ಕೊಂಡಿದ್ದರು. ಸರ್ಕಾರ ಉಟೋಪಚಾರದ ವ್ಯವಸ್ಥೆ ಮಾಡಿದ್ದು, ಕೆಲವರಂತೂ ಬೆಂಗಳೂರಿನಿಂದ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೋಗಿ ತಮ್ಮ ಊರುಗಳನ್ನು ಸೇರಿಕೊಂಡಿದ್ದರು.

ನಿನ್ನೆ ಕೇಂದ್ರ ಸರ್ಕಾರ ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿ ಕಾರ್ಮಿಕರಿಗೆ ಊರುಗಳಿಗೆ ತೆರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುತ್ತಿದ್ದಂತೆ ಸರ್ಕಾರ ಬಸ್‍ಗಳ ಮೂಲಕ ಅವರನ್ನು ಊರುಗಳಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಕಾರ್ಮಿಕರು ಅಪಾರ ಸಂಖ್ಯೆಯಲ್ಲಿ ಆಗಮಿಸಿದರು.

ರಾಯಚೂರು, ಬೀದರ್, ಗುಲ್ಬರ್ಗ, ಬಿಜಾಪುರ, ಬಳ್ಳಾರಿ, ಬೆಳಗಾಂ ಮುಂತಾದೆಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಇಂದು ಊರುಗಳಿಗೆ ತೆರಳಲು ಏಕಾಏಕಿ ಬಸ್‍ನಿಲ್ದಾಣಕ್ಕೆ ಬಂದಿದ್ದರಿಂದ ಬೆಂಗಳೂರು ಬಸ್ ನಿಲ್ದಾಣ ತುಂಬಿ ತುಳುಕುತ್ತಿತ್ತು. ಸಾಮಾಜಿಕ ಅಂತರ, ಲಾಕ್‍ಡೌನ್ ನಿಯಮಗಳು ಮೂಲೆಗುಂಪಾದಂತೆ ಕಂಡು ಬಂದವು.

ಇದರ ನಡುವೆಯೇ ಸಾರಿಗೆ ಇಲಾಖೆ ಅಧಿಕಾರಿಗಳು ಊರಿಗೆ ತೆರಳುವವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಮಾಡಿ ಪ್ರತಿಯೊಂದು ಬಸ್‍ನಲ್ಲಿ 30 ಜನರಂತೆ ಕಲಬುರಗಿ, ಯಾದಗಿರಿ, ಬಿಜಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕಳುಹಿಸುತ್ತಿದ್ದರು. ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುಮಾರು 2000 ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದೂ ಕೂಡ ಕಾರ್ಮಿಕರನ್ನು ಊರಿಗೆ ಕಳುಹಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ತಮ್ಮ ಮಕ್ಕಳು ಮರಿಗಳೊಂದಿಗೆ ಕಾರ್ಮಿಕರು ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಬಸ್‍ಗಳಿಗಾಗಿ ಕಾಯುತ್ತಿದ್ದುದು ಕಂಡು ಬಂತು. ಕಾರ್ಮಿಕರನ್ನು ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿರುವುದು ಕಂಡು ಬರುತ್ತಿದ್ದಂತೆ ಕಳೆದ 38 ದಿನಗಳಿಂದ ಲಾಕ್‍ಡೌನ್‍ನಲ್ಲಿದ್ದ ವಿವಿಧ ನೌಕರರು ಕೂಡ ಈ ಸಂದರ್ಭವನ್ನು ಬಳಸಿಕೊಂಡು ಊರಿಗೆ ತೆರಳಲು ಮುಂದಾಗಿದ್ದರಿಂದ ತೀವ್ರ ಗೊಂದಲ ಉಂಟಾಗಿದೆ.

ಗೊಂದಲದ ನಡುವೆಯೇ ಅಧಿಕಾರಿಗಳು ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಲು ಹರಸಾಹಸ ಪಟ್ಟರು. ಸಂಕಷ್ಟದಲ್ಲಿ ಕಾರ್ಮಿಕರು: ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದ ಜನ ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಹೋದರೆ ದುಪ್ಪಟ್ಟು ದರ ತೆರಬೇಕಾದುದನ್ನು ಕಂಡು ತೀವ್ರ ಸಂಕಷ್ಟಕ್ಕೀಡಾಗಿ ಸರ್ಕಾರವನ್ನು ಶಪಿಸುತ್ತಿದ್ದರು. ವಿದೇಶಗಳಿಂದ ಜನರನ್ನು ಉಚಿತವಾಗಿ ಸರ್ಕಾರ ಕರೆತರುತ್ತದೆ.

ರೈಲಿನಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಉಚಿತವಾಗಿ ಕಳುಹಿಸಿಕೊಡುತ್ತದೆ. ಆದರೆ ಬಸ್‍ನಲ್ಲಿ ನಮಗೆ ದರ ನಿಗದಿ ಮಾಡಿದೆ ಎಂದು ಹಲವು ಕಾರ್ಮಿಕರು ಅಲವತ್ತುಕೊಳ್ಳುತ್ತಿದ್ದುದು ಕಂಡುಬಂತು. ರಾಯಚೂರಿಗೆ ನಾಲ್ವರು ಹೋಗಬೇಕಾದರೆ 6 ಸಾವಿರ ಬೇಕಾಗುತ್ತದೆ. ಮೊದಲೇ ಕೆಲಸವಿಲ್ಲ, ಎಲ್ಲಿಂದ ತರಬೇಕು. ಇಷ್ಟು ಪ್ರಮಾಣದ ಟಿಕೆಟ್ ದರ ಹೇಗೆ ನೀಡಲಿ ಎಂದು ಹಲವರು ಪೇಚಾಡುತ್ತಿದ್ದರು.

ರಾಜಸ್ಥಾನದ ಸರ್ಕಾರ ತಮ್ಮ ಕಾರ್ಮಿಕರನ್ನು ಉಚಿತವಾಗಿ ತವರಿಗೆ ಕಳುಹಿಸಿತ್ತು. ಅಂತೆಯೇ ರಾಜ್ಯ ಸರ್ಕಾರ ನಮ್ಮನ್ನು ಕಳುಹಿಸಿಕೊಡಲಿ ಎಂದು ಗೊಣಗುತ್ತಲೇ ತಮ್ಮಲ್ಲಿದ್ದ ಅಲ್ಪ ಸ್ವಲ್ಪ ಪುಡಿಗಾಸನ್ನು ಹೊಂದಿಸಿಕೊಂಡು ಟಿಕೆಟ್ ಪಡೆದು ಹೇಗೋ ಊರಿಗೆ ಸೇರಿದರಾಯಿತು ಎಂದು ಕೊಂಡು ಬಸ್ ಹತ್ತುತ್ತಿದ್ದರು.

Facebook Comments

Sri Raghav

Admin