ಗೂಂಡಾ ಕಾಯ್ದೆಯಡಿ ಆರೋಪಿ ಬಂಧಿಸಲು ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.14- ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಗೂಂಡಾ ಪ್ರವೃತ್ತಿ ಮುಂದುವರಿಸಿದ್ದ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಲಾಗಿದೆ. ಮಾಗಡಿ ರಸ್ತೆ, ಚೋಳರಪಾಳ್ಯದ ಆರೋಪಿ ಸಂಜಯ್ (24) 2013ನೆ ಸಾಲಿನಿಂದ 2021ನೆ ಸಾಲಿನವರೆಗೆ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಹಲ್ಲೆ, ದರೋಡೆಗೆ ಯತ್ನ, ಗಾಂಜಾ ಮಾರಾಟ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

ಕೆಪಿ ಅಗ್ರಹಾರ, ಮಾಗಡಿ ರಸ್ತೆ, ವಿಜಯನಗರ, ಅನ್ನಪೂರ್ಣೇಶ್ವರಿ ನಗರ, ಚಂದ್ರಾ ಲೇಔಟ್ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿನ ಒಟ್ಟು 19 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಆರೋಪಿ ಸಂಜಯ್‍ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರೂ ಸಹ ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದು ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಗೂಂಡಾ ಪ್ರವೃತ್ತಿ ಮುಂದುವರಿಸಿದ್ದನು.

ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದರಿಂದ ಕೆಪಿ ಅಗ್ರಹಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸದಾನಂದ ಅವರು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಈತನ ವಿರುದ್ಧ ವರದಿ ತಯಾರಿಸಿದ್ದರು.

ಕರ್ನಾಟಕ ಅಕ್ರಮ ಮದ್ಯ ವ್ಯವಹಾರಗಾರರು, ಔಷಧಪರಾಧ ಮಾರಾಟಗಾರರು, ಜೂಜುಕೋರರು, ಗೂಂಡಾಗಳು, ಅನೈತಿಕ ವ್ಯವಹಾರಗಾರರು, ಕೊಳಚೆ ಪ್ರದೇಶ ಅತಿಕ್ರಮಿಸುವವರ ಹಾಗೂ ಆಡಿಯೋ ಕೃತಿ ಚೌರ್ಯಗಾರರ ಅಪಾಯಕಾರಿ ಚಟುವಟಿಕೆಗಳ ನಿಗ್ರಹ ಕಾಯ್ದೆಯನ್ವಯ ಈತನನ್ನು ಬಂಧನದಲ್ಲಿಡಲು ನಗರ ಪೊಲೀಸ್ ಆಯುಕ್ತರು ಬಂಧನದ ಆದೇಶ ಜಾರಿ ಮಾಡಿದ್ದಾರೆ.

Facebook Comments