ವಿಕಲಚೇತನರಿಗೆ 77 ದ್ವಿಚಕ್ರ ವಾಹನ ವಿತರಿಸಿದ ಸಚಿವ ಕೆ.ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.23- ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಾಡಿರುವ ಸಾಧನೆಗಳನ್ನು ಮನೆಮನೆಗೆ ತಲುಪಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್‍ನ ಶಾಸಕರ ಕಚೇರಿಯಲ್ಲಿ ವಿಕಲಚೇತನರಿಗೆ ಉಚಿತವಾಗಿ 77 ದ್ವಿಚಕ್ರ ವಾಹನ ಹಾಗೂ 400 ಮಂದಿ ಬಡವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

2014ರಿಂದ 2019ರ ವರೆಗೆ ಹಾಗೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮೋದಿ ಅವರ ಸಾಧನೆಗಳು ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿವೆ. ಇದನ್ನು ಮನೆಮನೆಗೆ ಕಾರ್ಯಕರ್ತರು ತಲುಪಿಸಿ ಬಿಜೆಪಿಯನ್ನು ಇನ್ನಷ್ಟು ಬೇರುಮಟ್ಟದಿಂದ ಸಂಘಟನೆ ಮಾಡಬೇಕೆಂದು ಹೇಳಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿರುವ ಕಾರಣ ಕರ್ನಾಟಕ ಇಂದು ಅಭಿವೃದ್ಧಿಯಲ್ಲಿ ಎಲ್ಲ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದೆ. 2023ರ ಚುನಾವಣೆಯಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ರೀತಿಯಲ್ಲಿ ಕಾರ್ಯಕರ್ತರು ಈಗಿನಿಂದಲೇ ತಮ್ಮ ವೈಮನಸ್ಸು ಮರೆತು ದುಡಿಯಬೇಕೆಂದು ಕಿವಿಮಾತು ಹೇಳಿದರು.

ಸಿಎಂ ಬಿಎಸ್‍ವೈ ಅವರು ನನಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಕೊಟ್ಟ ಮೇಲೆ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿಯೊಬ್ಬ ನಾಗರಿಕರಿಗೂ ಸಮರ್ಪಕವಾಗಿ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಿದ ತೃಪ್ತಿ ನನಗಿದೆ ಎಂದರು.

ಯಾವೊಬ್ಬ ಪ್ರಜೆಯೂ ಕೂಡ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕಾಗಿ ವಲಸಿಗರು ಸೇರಿದಂತೆ ಎಲ್ಲರಿಗೂ ಪಡಿತರ ಚೀಟಿ ಇಲ್ಲದಿದ್ದರೂ ಉಚಿತವಾಗಿ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದೇವೆ. ಎಲ್ಲರಿಗೂ ಗುಣಮಟ್ಟದ ಪಡಿತರವನ್ನೇ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ಉಚಿತವಾಗಿ ದ್ವಿಚಕ್ರ ವಾಹನ ನೀಡುವಂತೆ ಅರ್ಜಿ ಹಾಕಿದ ಎಲ್ಲ ವಿಕಲಚೇತನರಿಗೆ ವಿತರಣೆ ಮಾಡಲಾಗಿದೆ. ಇನ್ನು ಕೇವಲ 15 ಮಾತ್ರ ಬಾಕಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನು ಕೂಡ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಂಡಲ ಅಧ್ಯಕ್ಷ ರಾಘವೇಂದ್ರಶೆಟ್ಟಿ, ಮುಖಂಡರಾದ ಜಯರಾಮಯ್ಯ, ನಿಸರ್ಗ ಜಗದೀಶ್ ಮುಂತಾದವರು ಹಾಜರಿದ್ದರು.

Facebook Comments