ಗೆಲ್ಲುವ ಹುಮ್ಮಸ್ಸಿನೊಂದಿಗೆ  ಗೋಪಾಲಯ್ಯ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಮೂರನೇ ಬಾರಿ ಅದೃಷ್ಟವನ್ನು ಪಣಕ್ಕಿಟ್ಟು ಗೆಲ್ಲುವ ಹುಮ್ಮಸ್ಸಿನೊಂದಿಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಗೋಪಾಲಯ್ಯ  ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು.

ಸಚಿವ ಎಸ್.ಸುರೇಶ್‍ಕುಮಾರ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಪಕ್ಷದ ಮುಖಂಡರಾದ ಎಂ.ನಾಗರಾಜ್, ಬಿಬಿಎಂಪಿ ಮಾಜಿ ಉಪ ಮೇಯರ್ ಎಸ್.ಹರೀಶ್, ಬಿಬಿಎಂಪಿ ಸದಸ್ಯರಾದ ಹೇಮಲತಾ ಗೋಪಾಲಯ್ಯ, ಮಹದೇವು, ರಾಜೇಂದ್ರಕುಮಾರ್ ಸೇರಿದಂತೆ ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ರಾಜಾಜಿನಗರದ ಆರ್‍ಟಿಒ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ಬೆಳಗ್ಗೆ 11 ಗಂಟೆಗೆ ಶಂಕರಮಠದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನವರಂಗ್ ವೃತ್ತದ ಮೂಲಕ ರಾಜಾಜಿನಗರದ ಆರ್‍ಟಿಒ ಕಚೇರಿ ತಲುಪಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಗೋಪಾಲಯ್ಯ ಅವರಿಗೆ ಸ್ಥಳೀಯ ಮುಖಂಡರು, ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಮತ್ತಿತರರು ಬೆಂಬಲ ಸೂಚಿಸಿ ಉಪಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಿಸುವ ಪಣ ತೊಟ್ಟರು.

ಮೆರವಣಿಗೆಯುದ್ದಕ್ಕೂ ಗೋಪಾಲಯ್ಯ ಹಾಗೂ ಬಿಜೆಪಿ ಪರ ಜೈಕಾರ ಹಾಕಿ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರು 2018ರ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಂತಲೂ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಆಯ್ಕೆ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಕೆ.ಗೋಪಾಲಯ್ಯ, ಕಳೆದ ಎರಡು ಅವಧಿಯಲ್ಲಿ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿದೆ.

ಎಲ್ಲಾ ಸಮುದಾಯದವರ ಬೆಂಬಲ ನನಗಿರುವು ದರಿಂದ ಮತದಾರರು ನನ್ನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳಾಗಿರುವುದರಿಂದ ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ವಿಧಾನಸಭೆಗೆ ಆಯ್ಕೆ ಮಾಡಲಿದ್ದಾರೆ. ನನ್ನ ಗೆಲುವಿನ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದರು.

ನನ್ನ ಎದುರಾಳಿಗಳು ಏನೇ ಟೀಕೆ ಮಾಡಿದರೂ ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಶಾಸಕನಾಗಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತೇನೆ. ಈಗಾಗಲೇ ಎಲ್ಲೆಡೆ ನನಗೆ ಮತದಾರರಿಂದ ಉತ್ತಮವಾದ ಪ್ರಕ್ರಿಯೆಗೆ ವ್ಯಕ್ತವಾಗುತ್ತಿದೆ.

ಹಿರಿಯ ನಾಗರಿಕರಿಂದ ಹಿಡಿದು, ಮಹಿಳೆಯರು, ಯುವಕರು ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಉಪಚುನಾವಣೆಯಲ್ಲೂ ನಾನು ಗೆಲ್ಲುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೆ ಮತದಾರರು ನನ್ನನ್ನು ಕೈ ಹಿಡಿಯಬೇಕೆಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಗೋಪಾಲಯ್ಯ ಅವರು ಕುಟುಂಬ ಸಮೇತದ ಕ್ಷೇತ್ರದ ವಿವಿಧೆಡೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರಿಗೆ ಬಿಜೆಪಿಯ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.

Facebook Comments