ಗೋಪಾಲಯ್ಯಗೆ ಬೆಂಬಲ ಸೂಚಿಸಿದ ಜೆಡಿಎಸ್ ಬಿಬಿಎಂಪಿ ಸದಸ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20-ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾರಪ್ಪನ ಪಾಳ್ಯದ ಜೆಡಿಎಸ್‍ನ ಬಿಬಿಎಂಪಿ ಸದಸ್ಯ ಮಹದೇವು, ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯಗೆ ಬೆಂಬಲ ಸೂಚಿಸಿರುವುದು ಆನೆ ಬಲಬಂದಂತಾಗಿದೆ. ನಾವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಗೋಪಾಲಯ್ಯ ಅವರನ್ನೇ ಬೆಂಬಲಿಸುತ್ತೇವೆ. ನಮ್ಮನ್ನು ಜೆಡಿಎಸ್ ಮುಖಂಡರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಹದೇವು ಅಸಮಾಧಾನ ವ್ಯಕ್ತಪಡಿಸಿದರು.

ಕೆ.ಗೋಪಾಲಯ್ಯ ಅವರಿಂದಲೇ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್‍ನ ಭದ್ರ ಕೋಟೆಯಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಇಂದು ಚುನಾವಣೆಯೇ ನಡೆಯುತ್ತಿರಲಿಲ್ಲ. ಏನೇ ಆದರೂ ನಾವು ಅವರಿಗೆ ಬೆಂಬಲ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವೇಳೆಯೂ ಪಕ್ಷದ ಮುಖಂಡರು ಕನಿಷ್ಠ ಸೌಜನ್ಯಕ್ಕಾದರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇನ್ನು ನಮಗೆ ಜೆಡಿಎಸ್ ಅಭ್ಯರ್ಥಿಯ ಪರಿಚಯವೂ ಇಲ್ಲ. ಉಪಚುನಾವಣೆಯಲ್ಲಿ ನಾವು ಅವರನ್ನು ಬೆಂಬಲಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಗೋಪಾಲಯ್ಯ ಅವರಿಗೆ ಮಹದೇವು ಬೆಂಬಲ ಸೂಚಿಸಿರುವುದರಿಂದ ಬಿಜೆಪಿಗೆ ಕ್ಷೇತ್ರ ದಲ್ಲಿ ಇನ್ನಷ್ಟು ಶಕ್ತಿ ಬಂದಂತಾಗಿದೆ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಅನ್ಯ ಪಕ್ಷಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ.

ಇನ್ನು ಗೋಪಾಲಯ್ಯ ಅವರು ಇಂದು ಬೆಳಗ್ಗೆ ಕ್ಷೇತ್ರದ ನಾನಾ ಕಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಹಾಗೂ ಬಿಬಿಎಂಪಿ ಸದಸ್ಯರ ಜೊತೆಗೂಡಿ ಪ್ರಚಾರ ನಡೆಸಿದರು.

ಬೆಳಿಗ್ಗೆ ಉದ್ಯಾನವನಗಳಲ್ಲಿ ವಾಯು ವಿಹಾರ ನಡೆಸುತ್ತಿದ್ದ ಹಿರಿಯ ನಾಗರಿಕರು, ಸಾರ್ವ ಜನಿಕರು, ಯುವಕರು, ಯುವತಿಯರನ್ನು ಭೇಟಿ ಮಾಡಿ ಈ ಬಾರಿ ತಮ್ಮನ್ನು ಕೈಹಿಡಿಯಬೇಕೆಂದು ಕೋರಿದರು. ಸಜ್ಜನ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಸುರೇಶ್‍ಕುಮಾರ್, ಗೋಪಾಲಯ್ಯ ಪರ ಪ್ರಚಾರಕ್ಕೆ ಬಂದಿದ್ದು ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯಿತು.

Facebook Comments