ಮಹಾಲಕ್ಷ್ಮಿ ಲೇಔಟ್’ನಲ್ಲಿ ಗೋಪಾಲಯ್ಯ ಪರ ತಾರಾ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21-ದಿನದಿಂದ ದಿನಕ್ಕೆ ಪ್ರಚಾರದ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಇಂದು ಚಿತ್ರನಟಿ ತಾರಾ ಅನುರಾಧ ಮತಯಾಚನೆ ಮಾಡಿದರು.  ಇಂದು ಬೆಳಗ್ಗೆ ಮಹಾಲಕ್ಷ್ಮಿಲೇಔಟ್‍ನ ನಂದಿನಿ ಬಡಾವಣೆ, ಗಣೇಶ ಬ್ಲಾಕ್ ಮತ್ತಿತರ ಕಡೆ ಗೋಪಾಲಯ್ಯ ಪರ ಬಿರುಸಿನ ಪ್ರಚಾರ ನಡೆಸಿ ಉಪಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಮತದಾರರಿಗೆ ಮನವಿ ಮಾಡಿದರು.

ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿದ ತಾರಾ , ಹಿಂದೆ ಗೋಪಾಲಯ್ಯನವರು ಮಾಡಿರುವ ಅಭಿವೃದ್ದಿ ಕಾರ್ಯಗಳು ಹಾಗೂ ಮುಂದೆ ಮಾಡಲಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾರಾ, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಗೋಪಾಲಯ್ಯ ಅವರನ್ನು ಇಲ್ಲಿನ ಮತದಾರರು ಮನೆ ಮಗನಂತೆ ಕಾಣುತ್ತಾರೆ.

ನಮಗೆ ಫಲಿತಾಂಶದ ಬಗ್ಗೆ ಯಾವ ಆತಂಕವೂ ಇಲ್ಲ. ಜನರು ಅವರನ್ನು ಬಹುಮತಗಳ ಅಂತರ ದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ಎರಡು ಬಾರಿ ಶಾಸಕರಾಗಿದ್ದ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮ ಹೆಚ್ಚಿನ ಮತಗಳ ಅಂತರದಿಂದ ವಿಜಯಶಾಲಿ ಯಾಗಿದ್ದರು. ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯ ಎಂಬ ಹಿನ್ನೆಲೆ ಯಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮತದಾರರು ತಮ್ಮ ಮನೆಯ ಮಗನ ರೀತಿಯಲ್ಲೇ ನೋಡುತ್ತಿದ್ದಾರೆ.

ಈ ಬಾರಿ ಹಿಂದಿನ ಚುನಾವಣೆ ಗಳಿಗಿಂತಲೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು. ಇನ್ನೊಂದೆಡೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಕೂಡ ನಂದಿನಿ ಬಡಾವಣೆ ಮತ್ತಿತರ ಕಡೆ ಪಕ್ಷದ ಮುಖಂಡರ ಜೊತೆ ಬೆಳಗಿನಿಂದಲೇ ಮತಯಾಚನೆ ಮಾಡಿದರು.

ಬಿಬಿಎಂಪಿ ಮಾಜಿ ಉಪಮೇಯರ್‍ಗಳಾದ ಎಸ್.ಹರೀಶ್, ರಂಗಣ್ಣ ಸೇರಿದಂತೆ ಸ್ಥಳೀಯ ಮುಖಂಡರು, ಭಾರೀ ಸಂಖ್ಯೆಯ ಕಾರ್ಯಕರ್ತರು ಗೋಪಾಲಯ್ಯ ಪರ ವಿವಿಧೆಡೆ ಮತಯಾಚನೆಯಲ್ಲಿ ತೊಡಗಿಸಿಕೊಂಡರು. ಈ ಬಾರಿ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿಯ ಕಮಲವನ್ನು ಅರಳಿಸಲೇಬೇಕೆಂದು ತೀರ್ಮಾನಿಸಿ ರುವ ಬಿಜೆಪಿ ಮುಖಂಡರು ಗೋಪಾಲಯ್ಯನವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

Facebook Comments