ಜನಪರ ಕಾರ್ಯಗಳೇ ನನ್ನ ಕೈ ಹಿಡಿಯಲಿವೆ : ಗೋಪಾಲಯ್ಯ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಅಭಿವೃದ್ದಿ ಪರವಾಗಿ ರುವ ಕ್ಷೇತ್ರದ ಮತದಾರರು ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಈ ಉಪಚುನಾವಣೆಯಲ್ಲಿ ನನ್ನ ಜನಪರವಾದ ಕಾರ್ಯಗಳೇ ಕೈ ಹಿಡಿಯಲಿವೆ ಎಂದು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ಜೈಮಾರುತಿ ನಗರ ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ ಪಾಲಿಕೆ ಸದಸ್ಯ ರಾಜೇಂದ್ರಕುಮಾರ್, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ವೇಳೆ ಬೀದಿಬದಿ ವ್ಯಾಪಾರಸ್ಥರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನು ಭೇಟಿಯಾಗಿ ಡಿ.5ರಂದು ನಡೆಯುವ ಉಪಚುನಾವಣೆಯಲ್ಲಿ ಕಮಲದ ಗುರುತಿನ ಚಿಹ್ನೆಗೆ ಮತ ಹಾಕಿ ತಮ್ಮನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕೋರಿದರು.  ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ, ಕ್ಷೇತ್ರದಲ್ಲಿ ನಾನು ಎಲ್ಲ ಮತದಾರರನ್ನು ಭೇಟಿಯಾಗಿದ್ದೇನೆ. ಜಾತಿ, ಧರ್ಮ, ಮತ, ಪಂಥ ಬೇಧ ಮರೆತು ನನಗೆ ಬೆಂಬಲ ಸೂಚಿಸಿದ್ದಾರೆ. ಗೆಲುವಿನ ಬಗ್ಗೆ ಸಾಸಿವೆ ಕಾಳಿನಷ್ಟು ಸಂಶಯ ಇಲ್ಲ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಎರಡು ಬಾರಿ ಶಾಸಕನಾಗಿದ್ದಾಗ ನಾನು ಕ್ಷೇತ್ರದಲ್ಲಿ ಮತದಾರರನ್ನು ಯಾವುದೇ ರೀತಿಯ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನತೆಯಿಂದ ಕಂಡಿದ್ದೇನೆ. ಇಲ್ಲಿನ ಮತದಾರರು ಅಭಿವೃದ್ದಿಪರವಾಗಿ ನಿಲ್ಲುತ್ತಾರೆ ಎಂಬುದಕ್ಕೆ ನನ್ನ ಗೆಲುವೇ ನಿದರ್ಶನವಾಗಲಿದೆ ಎಂದರು. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ನನಗೆ ಬೆಂಬಲ ಸೂಚಿಸಿದ್ದಾರೆ. ಗೋಪಾಲಣ್ಣ ಇದ್ದರೆ ಕ್ಷೇತ್ರ ಅಭಿವೃದ್ದಿಯಾಗುತ್ತದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ನಾನು ಇನ್ನು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ಫಲಿತಾಂಶದ ನಂತರ ಮತದಾರರಿಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇನೆ ಎಂದು ವಾಗ್ದಾನ ಮಾಡಿದರು.  ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಕೆ.ಗೋಪಾಲಯ್ಯ ಪರವಾಗಿ ಸಚಿವರಾದ ವಿ.ಸೋಮಣ್ಣ, ಎಸ್.ಸುರೇಶ್‍ಕುಮಾರ್, ಪಾಲಿಕೆ ಸದಸ್ಯರಾದ ಹೇಮಲತ ಗೋಪಾಲಯ್ಯ, ರಾಜೇಂದ್ರ ಕುಮಾರ್, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು,ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಅನೇಕ ಮುಖಂಡರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿ ಬಿಜೆಪಿ ಗೆಲುವಿಗೆ ಪಣ ತೊಟ್ಟಿದ್ದಾರೆ.

Facebook Comments