“ನಾನು ಮಹಾಲಕ್ಷ್ಮಿಲೇಔಟ್ ಮನೆ ಮಗ, ನನ್ನ ಗೆಲುವಿನ ಬಗ್ಗೆ ಸಂಶಯವಿಲ್ಲ” : ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ರಾಜಕೀಯವಾಗಿ ಜನ್ಮ ನೀಡಿದಂತಹ ಕ್ಷೇತ್ರ. ಈ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಗೆಲುವು ಶತಸಿದ್ದ ಎಂದು ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಬೆಳಗ್ಗೆ ಕ್ಷೇತ್ರದ ವಿವಿಧೆಡೆ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ ಅವರು, ಮಹಾಲಕ್ಷ್ಮಿ ಲೇಔಟ್ ನಾನು ಹುಟ್ಟಿಬೆಳೆದ ಊರು.

ಇದು ನನ್ನ ರಾಜಕೀಯ ಕರ್ಮಭೂಮಿಯೂ ಹೌದು. ಮತ ದಾರರು ನನ್ನನ್ನು ಮನೆ ಮಗನಂತೆ ಕಂಡಿದ್ದಾರೆ. ಹೀಗಾಗಿ ನನ್ನ ಗೆಲುವಿನ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ನನ್ನ ಗೆಲುವು ಶತಸಿದ್ದ. ಕಳೆದ ಬಾರಿ ಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ನುಡಿದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿ ಸುತ್ತಿದ್ದೇನೆ. ಕ್ಷೇತ್ರದ ಜನ ನನಗೆ ಬಹುಮತ ಕೊಡುತ್ತಾರೆ ಎಂಬ ನಂಬಿಕೆಯಿದೆ.

ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕನಸು ಕಂಡಿದ್ದೇನೆ. ಉಪಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಕೈಹಿಡಿದರೆ ಮಹಾಲಕ್ಷ್ಮಿಲೇಔಟ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ವಾಗ್ದಾನ ಮಾಡಿದರು.  ನನಗೆ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಲ್ಲದೆ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ನನ್ನ ಜೊತೆಗಿದ್ದು, ಗೆಲುವಿಗೆ ಸಹಕಾರ ನೀಡುತ್ತಿದ್ದಾರೆ. ಖಂಡಿತ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಂದ ಜಯಗಳಿಸುವೆ ಎಂದು ಪುನರುಚ್ಚರಿಸಿದರು.

ಇಲ್ಲಿನ ಮತದಾರರು ಹಣದ ಆಸೆಗಾಗಿ ತಮ್ಮ ಮತವನ್ನು ಮಾರಾಟ ಮಾಡಿಕೊಳ್ಳುವಷ್ಟು ದಡ್ಡರಲ್ಲ. ಅವರ ಪ್ರತಿಯೊಂದು ಕಷ್ಟಸುಖಗಳಿಗೆ ನಾನು ಸ್ಪಂದಿಸಿದ್ದೇನೆ. ಸೂರಿಲ್ಲದವರಿಗೆ ಮನೆ, ಉದ್ಯೋಗ, ಹಿರಿಯ ನಾಗರಿಕರಿಗೆ ಪಿಂಚಣಿ, ಮಧ್ಯಮ ವರ್ಗದವರಿಗೆ ಪಡಿತರಚೀಟಿ ವಿತರಣೆ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ನನಗೆ ಎಲ್ಲಿಯೂ ಕೂಡ ವಿರೋಧ ಇಲ್ಲ ಎಂದು ತಿಳಿಸಿದರು.

ಕ್ಷೇತ್ರದ ಮಾರಪ್ಪನ ಪಾಳ್ಯದ ಆರ್‍ಎಂಸಿ ಯಾರ್ಡ್ ಸೇರಿದಂತೆ ಮತ್ತಿತರ ಕಡೆ ಸಚಿವರಾದ ಸೋಮಣ್ಣ, ಸುರೇಶ್‍ಕುಮಾರ್, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಪಾಲಿಕೆ ಸದಸ್ಯರು, ಕಾರ್ಯಕರ್ತರು ಮತ್ತಿತರರು ಹಲವು ಕಡೆ ಬಿರುಸಿನ ಪ್ರಚಾರ ನಡೆಸಿ ಗೋಪಾಲಯ್ಯ ಅವರನ್ನು ಗೆಲ್ಲಿಸಲೇಬೇಕೆಂದು ಮತದಾರರಿಗೆ ಮನವಿ ಮಾಡಿದರು.

Facebook Comments