ಜವಾಬ್ದಾರಿ ವಹಿಸಿಕೊಂಡ ಮರುದಿನವೇ ಅಧಿಕಾರಿಗಳು, ಪೊಲೀಸರ ಜೊತೆ ಸಚಿವ ಗೋಪಾಲಯ್ಯ ಮೀಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಪೀಣ್ಯ ದಾಸರಹಳ್ಳಿ : ಇನ್ನು 3 ತಿಂಗಳ ಕಾಲ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸಿ ದಾಸರಹಳ್ಳಿ ವಲಯದಲ್ಲಿ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ಆಹಾರ ಸಚಿವರಾದ ಕೆ ಗೋಪಾಲಯ್ಯ ತಿಳಿಸಿದರು.

ಗುರುವಾರವಷ್ಟೇ ಮುಖ್ಯಮಂತ್ರಿಗಳು ಸಭೆ ನಡೆಸಿ ಕೋವಿಡ್ 19 ಸೋಂಕು ನಿಯಂತ್ರಣ ಸಂಬಂಧ ಬೆಂಗಳೂರನ್ನು 8 ವಿಭಾಗಗಳಾಗಿ ವಿಂಗಡಿಸಿ ದಾಸರಹಳ್ಳಿ ವಲಯಕ್ಕೆ ಆಹಾರ ಮತ್ತು ನಾಗರಿಕ ಸಚಿವ ಕೆ. ಗೋಪಾಲಯ್ಯ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರವೇ ಈ ಭಾಗದ ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹಮೂರ್ತಿ, ಆರೋಗ್ಯ, ಬಿಬಿಎಂಪಿ, ಕಂದಾಯ ಇಲಾಖೆಗಳ ಅಧಿಕಾರಿಗಳು, ಪೀಣ್ಯ ಮತ್ತು ಬಾಗಲಗುಂಟೆ ಪೊಲೀಸರ ಜೊತೆ ಸಭೆ ನಡೆಸಿ ಮಾತನಾಡಿದರು.

ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ 8 ವಾರ್ಡ್ ಗಳ ಕಾರ್ಪೋರೇಟರ್ ಗಳನ್ನು ವೈಯುಕ್ತಿಕವಾಗಿ ಕರೆದು ಸಭೆ ನಡೆಸುತ್ತೇನೆ. ಶೀಘ್ರವೇ ಸಭೆ ನಡೆಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

# ಒಂದು ದಿನವೂ ಆರಾಮ-ವಿರಾಮ ಇಲ್ಲ
ನಾನು ಸಚಿವನಾದಾಗಿನಿಂದ ಒಂದು ದಿನವೂ ಆರಾಮ ಹಾಗೂ ವಿರಾಮವನ್ನು ತೆಗೆದುಕೊಂಡಿಲ್ಲ ಪ್ರತಿದಿನ ರಾಜ್ಯಾದ್ಯಂತ ಪ್ರವಾಸಮಾಡಿ ಜನರ ಸಮಸ್ಯೆ ಆಲಿಸಿ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇನೆ.

ಇನ್ನು ಟೆಸ್ಟಿಂಗ್ ವರದಿ ವಿಳಂಬ ಹಿನ್ನೆಲೆ ಅನೇಕ ದೂರುಗಳು ಬಂದಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಕ್ರಮವಹಿಸಲಾಗುವುದು. ಪ್ರತಿದಿನ ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಎಲ್ಲ ಸಚಿವರು ಕೋವಿಡ್ ಬಗ್ಗೆಯೇ ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಸರ್ಕಾರ ಸದಾ ಸಾರ್ವಜನಿಕರ ಹಿತರಕ್ಷಣೆಗೆ ಇದೆ ಎಂದು ಸಚಿವರು ತಿಳಿಸಿದರು.

# ರೋಗಿಗಳನ್ನು ಕಾಯಿಸಬೇಡಿ : 
ಯಾವ ಕಡೆಯೂ ಪಾಸಿಟಿವ್ ಬಂದ ಮೇಲೆ ಯಾವ ರೋಗಿಗಳನ್ನು ಕಾಯಿಸದೇ ಕೂಡಲೇ ಆಸ್ಪತ್ರೆಗಳಿಗೆ ಕೆಲಸವನ್ನು ಮಾಡಬೇಕು. ಯಾವುದೇ ವಾರ್ಡ್ ನಲ್ಲಿ ದೂರುಗಳು ಬಂದರೆ ಆಯಾ ವಾರ್ಡ್ ಗಳ ಕಾರ್ಪೋರೇಟರ್ ಹಾಗೂ ಇಂಜಿನಿಯರ್ ಗಳೇ ಹೊಣೆಗಾರರಾಗುತ್ತಾರೆ. ಹೀಗಾಗಿ ತಕ್ಷಣ ದೂರುಗಳಿಗೆ ಸ್ಪಂದಿಸಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಯಾವ ಕಡೆಯೂ ಸ್ಯಾನಿಟೈಸರ್ ಇಲ್ಲ ಎಂಬ ದೂರುಗಳು ಬರುತ್ತಿವೆಯೋ ಅಲ್ಲಿಗೆ ಸೂಕ್ತ ವ್ಯವಸ್ಥೆ ಮಾಡಿ ಬೇಕಾದ ಸೌಕರ್ಯವನ್ನು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

# ಸಣ್ಣ ದೂರೂ ಬರದಂತೆ ನೋಡಿಕೊಳ್ಳಿ
ಕೋವಿಡ್ ಮುಗಿಯುವವರೆಗೂ ಸಹ ದಾಸರಹಳ್ಳಿ ವ್ಯಾಪ್ತಿಯಲ್ಲಿ ಒಂದು ಸಣ್ಣ ದೂರುಗಳು ಬರದಂತೆ ನಾವು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಲಾಕ್ ಡೌನ್ ಇದ್ದಾಗ ಪ್ರಕರಣ ಹೆಚ್ಚು ಇರಲಿಲ್ಲ. ಯಾವಾಗ ಸಡಿಲಿಕೆಯಾಯಿತೋ ಆ ನಂತರ ಬೆಂಗಳೂರು ಸೇರದಂತೆ ರಾಜ್ಯದ ಎಲ್ಲ ಕಡೆ ಸೋಂಕಿತರ ಪ್ರಕರಣಗಳು ಹೆಚ್ಚಾಗತೊಡಗಿದವು. ಈ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಾಳ್ಮೆ ಹಾಗೂ ಸಹಕಾರವನ್ನು ನೀಡಬೇಕು ಎಂದು ಸಚಿವರು ಕೋರಿಕೊಂಡರು.

# ಪಾಸಿಟಿವ್ ಬೀದಿಗಳ ಸ್ಯಾನಿಟೈಸ್ ಮಾಡಿ
ಪಾಸಿಟಿವ್ ಪ್ರಕರಣ ಬಂದ ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಸಮರ್ಪಕವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆಯೇ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು, ಈ ಬಗ್ಗೆ ದೂರುಗಳು ಬರದಂತೆ ಕ್ರಮ ವಹಿಸಬೇಕು ಜೊತೆಗೆ ಎಲ್ಲೆಲ್ಲಿ ಸಮಸ್ಯೆ ಕಂಡಬಂದರೂ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಅಲ್ಲದೇ ಕ್ಷೇತ್ರದ ಪ್ರತಿ ವಾರ್ಡ್, ವಾರ್ಡ್ ನಪ್ರತಿ ರಸ್ತೆ ಮನೆಗಳಿಗೆ ಸೋಮವಾರದ ಒಳಗೆ ಸ್ಯಾನಿಟೈಸ್ ಮಾಡುವಂತೆ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹ ಮೂರ್ತಿ ಅವರಿಗೆ ಸೂಚನೆನೀಡಿದರು.

ದಾಸರಹಳ್ಳಿ ಶಾಸಕರ ಆರ್.ಮಂಜುನಾಥ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೋವಿಡ್ ಸಮಸ್ಯೆಗಳು ಕೆಲವು ಕಡೆ ಹೆಚ್ಚಾಗುತ್ತಿದ್ದು, ನಾವೆಲ್ಲ ಸೇರಿ ನಿಯಂತ್ರಣಕ್ಕೆ ಒತ್ತು ಕೊಡುತ್ತಿದ್ದೇವೆ. ಕೆಲವು ಕಡೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಅವುಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು .ಆಹಾರ ಸಚಿವ ಗೋಪಾಲಯ್ಯ ಅವರನ್ನು ನಮ್ಮ ಕ್ಷೇತ್ರದ ಕೋವಿಡ್ ನಿಯಂತ್ರಣಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಸಂತಸದ ವಿಷಯ. ಅವರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳಿದರು.

# ಅಧಿಕಾರಿಗಳಿಂದ ಇಲ್ಲ ಸ್ಪಂದನೆ; ಆರೋಪ : 
ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬಹಳ ಸಬೂಬುಗಳು ಕೇಳಿಬರುತ್ತಿವೆ. ಪಾಸಿಟಿವ್ ಬಂದ ಕೇಸ್ ಗಳ ಮನೆಯವರಿಗೆ ಮೂಲ ಸೌಲಭ್ಯ ನೀಡುತ್ತಿಲ್ಲ. ಸಾಮಾನ್ಯ ಅಗತ್ಯ ವಸ್ತುಗಳಾದ ಹಾಲು, ತರಕಾರಿ ಸಹ ಅವರ ಮನೆ ಬಾಗಿಲಿಗೆ ಸಿಗುತ್ತಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಹೊರಬಂದು ಕೊಳ್ಳುವ ಪರಿಸ್ಥಿತಿ ಇದೆ. ಸೀಲ್ ಡೌನ್ ವ್ಯವಸ್ಥೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತುವೆ ಎಂದು ಶಾಸಕ ಆರ್. ಮಂಜುನಾಥ್ ಆರೋಪ ಮಾಡಿದರು.

ಒಬ್ಬ ಪಾಸಿಟಿವ್ ಸೋಂಕಿತನಿಂದ 15 ಮಂದಿ ಪ್ರೈಮರಿ ಕಾಂಟ್ಯಾಕ್ಟ್ ಇರುತ್ತದೆ. ಹೀಗಾಗಿ ಅವರನ್ನು ಪತ್ತೆ ಹಚ್ಚಿ ಕ್ವಾರಂಟೇನ್ ಮಾಡಬೇಕು. ಕಂಟೈನೆಂಟ್ ಝೋನ್ ವೈದ್ಯಾಧಿಕಾರಿಗಳು ಮಾತ್ರ ಹೋಗುವಂತಾಗಬೇಕು, ಶಂಕಿತ ಸೋಂಕಿತರು ಹೊರಬಂದು ಪರೀಕ್ಷೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಬಾರದು, ಹೋಂ ಕ್ವಾರಂಟೇನ್ ನಲ್ಲಿದ್ದವರು ನಿಗದಿತ ದಿನದವರೆಗೆ ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಮಾಡಬೇಕು ಎಂಬ ಉದ್ದೇಶದಿಂದ ಮಲ್ಲಸಂದ್ರ ವಾರ್ಡ್ ನಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದು ಪಾಲಿಕೆ ಸದಸ್ಯ ಎನ್. ಲೋಕೇಶ್ ಸಚಿವರಿಗೆ ಹೇಳಿದರು.

ನಮ್ಮ ವಾರ್ಡ್ ನಲ್ಲಿ ಒಂದು ಲಕ್ಷದ ಮೂವತ್ತು ಸಾವಿರ ಜನಸಂಖ್ಯೆ ಇದೆ ಜೊತೆಗೆ ಎರಡು ಪಂಚಾಯತಿಗಳು ಇದ್ದು ಇಷ್ಟು ದೊಡ್ಡ ವಿಭಾಗಕ್ಕೆ ಅಬ್ಬಿಗೆರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದೇ ಇರುವುದು. ಆದರೆ ಇಲ್ಲಿ ಕೇವಲ ಒಬ್ಬರೇ ವೈದ್ಯರಿದ್ದಾರೆ. ಇನ್ನಷ್ಟು ಹೆಚ್ಚು ವೈದ್ಯರನ್ನು ನಿಯೋಜಿಸಬೇಕು.

Facebook Comments

Sri Raghav

Admin