ಸರ್ಕಾರಿ ನೌಕರರು, ಆರ್ಥಿಕ ಸದೃಢರು ಬಿಪಿಎಲ್ ಪಡಿತರಚೀಟಿ ಹಿಂತಿರುಗಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.5-ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಸೇರಿದಂತೆ ಆರ್ಥಿಕವಾಗಿ ಸದೃಢವಾಗಿರುವವರು ಕೂಡಲೇ ತಮ್ಮ ಬಿಪಿಎಲ್ ಪಡಿತರಚೀಟಿಗಳನ್ನು ಹಿಂತಿರುಗಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿ ಗಣಪತಿನಗರ ವಾರ್ಡ್‍ನಲ್ಲಿ ನಿಸರ್ಗ ಫೌಂಡೇಷನ್ ಹಮ್ಮಿಕೊಂಡಿದ್ದ ಸಸಿ ವಿತರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡತನ ರೇಖೆ(ಬಿಪಿಎಲ್)ಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಸರ್ಕಾರ ಪಡಿತರ ಧಾನ್ಯಗಳನ್ನು ಪ್ರತಿ ತಿಂಗಳು ನೀಡುತ್ತಿದೆ. ಸರ್ಕಾರಿ ನೌಕರರು, ನಿವೃತ್ತಿಯಾಗಿರುವವರು ಇಲ್ಲವೇ ಅನುಕೂಲಸ್ಥರು ಈ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದರೆ ಹಿಂದಿರುಗಿಸಬೇಕು. ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಯಾವುದೇ ಪ್ರಜೆಗಳು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆಯಂತೆ ರಾಜ್ಯ ಮತ್ತು ವಲಸಿಗರಿಗೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದೇವೆ.

ಪಡಿತರಚೀಟಿ ಇಲ್ಲದಿದ್ದರೂ ಆಧಾರ್‍ಕಾರ್ಡ್ ತೋರಿಸಿಯೂ ರಾಜ್ಯದ ಯಾವುದೇ ಭಾಗದಲ್ಲೂ ಪಡಿತರ ಪಡೆಯಬಹುದು. ಒಬ್ಬರಿಗೆ 10 ಕೆಜಿ ಅಕ್ಕಿ, 2 ಕೆಜಿ ಕಡಲೆಕಾಳು ನೀಡಿದ್ದೇವೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಗೋಪಾಲಯ್ಯ ಮನವಿ ಮಾಡಿದರು.

ಪರಿಸರ ಕಾಳಜಿ ಕುರಿತಂತೆ ಮಾತನಾಡಿದ ಅವರು, ಕೋವಿಡ್ ಜೊತೆ ನಾವು ಅನಿವಾರ್ಯವಾಗಿ ಬದುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದೇ ದಿನದಲ್ಲಿ ನಿಯಂತ್ರಣವಾಗುತ್ತದೆ ಎಂಬ ಮನೋಭಾವ ಬೇಡ. ಸ್ವಯಂ ಜಾಗೃತಿ ಬೆಳೆಸಿಕೊಂಡರೆ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದೆಂದು ಕಿವಿಮಾತು ಹೇಳಿದರು.

ನಿಮ್ಮ ನಿಮ್ಮ ಮನೆಗಳಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ, ಹೊರಗೆ ಹೋಗಿ ಬಂದ ತಕ್ಷಣವೇ ಕೈಕಾಲು, ಮುಖ ತೊಳೆಯುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕೊರೊನಾ ತಡೆಗಟ್ಟಬಹುದು ಎಂದರು.

ನಿಮ್ಮ ನಿಮ್ಮ ಬಡಾವಣೆಗಳಲ್ಲಿ ಹೊರರಾಜ್ಯದಿಂದ ಯಾರೇ ಬಂದರೂ ತಕ್ಷಣವೇ ಪೆÇಲೀಸ್ ಠಾಣೆಗಳು ಇಲ್ಲವೇ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತದೆ. ಎಲ್ಲರೂ ಎಚ್ಚರದಿಂದಿರಬೇಕು ಎಂದು ಸಲಹೆ ಮಾಡಿದರು.

ಆರೋಗ್ಯವೇ ಭಾಗ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ನಮಗೆ ಎಷ್ಟೇ ದುಡ್ಡಿದ್ದರೂ ಆರೋಗ್ಯವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಮನೆಗಳಲ್ಲಿ ಒಂದೊಂದು ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಒಬ್ಬೊಬ್ಬರು ಮನೆ ಮುಂದೆ ಹಾಗೆಯೇ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಿದರೆ ಪರಿಸರ ಸಂರಕ್ಷಣೆಯಾಗುತ್ತದೆ. ಇದರಿಂದ ಕಾಲಕಾಲಕ್ಕೆ ಮಳೆಯಾಗಿ ಎಲ್ಲವೂ ಸಮೃದ್ಧಿಯಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು. ಇದೇ ವೇಳೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಾರ್ಡ್‍ನಲ್ಲಿ ಸಸಿ ನೆಟ್ಟು ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಿದರು.

ಈ ವೇಳೆ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಮಹಾಲಕ್ಷ್ಮಿ ಲೇಔಟ್ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮುಖಂಡರಾದ ಜಯರಾಮಯ್ಯ, ನಿಸರ್ಗ ಜಗದೀಶ್, ಶ್ರೀನಿವಾಸ್, ಗಂಗಹನುಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments