ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೊಟಬಾಯಾ ರಾಜಪಕ್ಸೆ ಭರ್ಜರಿ ಗೆಲುವು
ಕೊಲೊಂಬೊ, ನ.17- ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಿನ್ನೆ ನಡೆದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿರೋಧ ಪಕ್ಷದ ನಾಯಕ ಗೊಟಬಾಯಾ ರಾಜಪಕ್ಸೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಆಡಳಿತ ಪಕ್ಷದ ಸಜಿತ್ ಪೇಮದಾಸ ಅವರನ್ನು ಪರಾಭವಗೊಳಿಸಿದರು.
ಈಸ್ಟರ್ ಸಂಡೇ ಬಾಂಬ್ ದಾಳಿ ಕರಾಳ ಛಾಯೆ ನಡುವೆ ನಿನ್ನೆ ಶ್ರೀಲಂಕಾದಲ್ಲಿ ಭಾರೀ ಬಂದೋಬಸ್ತ್ ನಡುವೆ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಮತದಾರರಿಂದ ಬಸ್ಗಳ ಮೆಲೆ ಬಂದೂಕುಧಾರಿಗಳ ದಾಳಿ ಸೇರಿದಂತೆ ಕೆಲವು ಅಹಿತಕರ ಘಟನೆಗಳು ನಡೆದಿದ್ದವು.
ಇಂದು ಬೆಳಗ್ಗೆ ಮತ ಎಣಿಕೆ ಆರಂಭವಾಯಿತು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದ ರಾಜಪಕ್ಸೆ ಜಯ ಸಾಧಿಸಿದರು. ಚುನಾವಣೆಗಳು ನಡೆದ ದೇಶದ 22 ಜಿಲ್ಲೆಗಳಲ್ಲಿ ರಾಜಪಕ್ಸೆ 16 ಪ್ರಾಂತ್ಯಗಳಲ್ಲಿ ವಿಜಯಿಯಾಗಿದ್ದಾರೆ.
ಎಪ್ಪತ್ತು ವರ್ಷದ ರಾಜಪಕ್ಸ ಮಾಜಿ ಉನ್ನತ ಸೇನಾಧಿಕಾರಿ (ನಿವೃತ್ತ ಲೆಫ್ಟಿನೆಂಟ್ ಕರ್ನಲ್). ಅವರು ಶ್ರೀಲಂಕಾದ ಏಳನೇ ಅಧ್ಯಕ್ಷರಾಗಲಿದ್ದಾರೆ. ರಾಜಪಕ್ಸೆ ಅವರ ಗೆಲುವಿಗೆ ಪ್ರತಿಸ್ಪರ್ಧಿ ಅಭ್ಯರ್ಥಿ ಸಜಿತ್ ಪ್ರೇಮದಾಸ ಅಭಿನಂದನೆ ಸಲ್ಲಿಸಿದ್ದಾರೆ.
ಈಸ್ಟರ್ ಸಂಡೇ ದಿನದಂದೇ ರಾಜಧಾನಿ ಕೊಲೊಂಬೋ ಸೇರಿದಂತೆ ವಿವಿಧೆಡೆ ಪಂಚತಾರಾ ಹೋಟೆಲ್ಗಳು ಮತ್ತು ಚರ್ಚ್ಗಳ ಮೇಲೆ ನಡೆದ ಸರಣಿ ಮಾನವ ಬಾಂಬ್ ಸ್ಫೋಟಗಳಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.