ಕೊನೆ ಕ್ಷಣದ ದಿಢೀರ್ ಬೆಳವಣಿಗೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತ ನೇಮಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊನೆ ಕ್ಷಣದಲ್ಲಿ ನಡೆದ ದಿಢೀರ್ ಬೆಳೆವಣಿಗೆಯಿಂದಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೃಹತ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಪಾಲಿಕೆ ಸದಸ್ಯರ 5 ವರ್ಷದ ಅಧಿಕಾರ ಅವಧಿ ಇಂದಿಗೆ ಮುಕ್ತಾಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಗೌರವ್ ಗುಪ್ತ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಗೌರವ್ ಗುಪ್ತ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಬಿಬಿಎಂಪಿಗೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಬಿಬಿಎಂಪಿಯ ಆಡಳಿತ ನಿರ್ವಹಿಸಲಿದ್ದಾರೆ.

ಇಂದು ಬೆಳಗ್ಗೆಯಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮ ಅವರು ಬಿಬಿಎಂಪಿಗೆ ಸರ್ಕಾರ ಆಡಳಿತಧಿಕಾರಿಯನ್ನಾಗಿ ನೇಮಕ ಮಾಡಲಿದೆ ಎನ್ನಲಾಗುತ್ತಿತ್ತು. ಸ್ವತಃ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಕೂಡ ಇದಕ್ಕೆ ಒಲವು ತೋರಿದ್ದರು.

ಆದರೆ, ಮಧ್ಯಾಹ್ನದ ಬಳಿಕ ನಡೆದ ಬೆಳವಣಿಗೆಯಲ್ಲಿ ಗೌರವ್ ಗುಪ್ತ ಅವರಿಗೆ ಈ ಹುದ್ದೆ ಒಲಿದಿದೆ. ಮೂಲಗಳ ಪ್ರಕಾರ ಬಿಬಿಎಂಪಿಗೆ ಆಡಳಿತಧಿಕಾರಿಯಾಗಲು ಸ್ವತಃ ವಂದಿತಾ ಶರ್ಮ ಅವರೇ ಒಲವು ತೋರಲಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್ .ವಿಜಯ್ ಭಾಸ್ಕರ್ ಅವರು ಇದೇ ಡಿಸೆಂಬರ್ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ತೆರವಾಗಲಿರುವ ಮುಖ್ಯ ಕಾರ್ಯದರ್ಶಿ ಹುದ್ದೆಯ ಮೇಲೆ ವಂದಿತಾ ಶರ್ಮ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನೇಮಕವಾದರೆ, ಸರ್ಕಾರ ತಮ್ಮನ್ನು ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನುವ ಕಾರಣಕ್ಕಾಗಿ ಆಸಕ್ತಿ ತೋರಲಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮಹಿಳಾ ಕೋಟಾದಲ್ಲಿ ತಮ್ಮನ್ನು ವಿಜಯ್ ಭಾಸ್ಕರ್ ನಿವೃತ್ತಿ ನಂತರ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪರಿಗಣಿಸುವಂತೆ ವಂದಿತಾ ಶರ್ಮ ತೆರೆಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಬಿಬಿಎಂಪಿಯ ವಾಡ್9ಗಳ ಮರುವಿಂಗಡಣೆ  ಕಾರಣದಿಂದಾಗಿ ಈ ಬಾರಿ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ತೀರಾ ಕಡೆ ಕಡಿಮೆ ಎನ್ನಲಾಗಿದೆ.

ಇದೇ 21 ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಬಿಎಂಪಿ ವಾರ್ಡ್ ಗಳ ಹೆಚ್ಚಳ ಮಾಡುವ ಹಾಲಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿದೆ. ಸರ್.ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ರಘ ನೇತೃತ್ವದಲ್ಲಿ ವಿಧಾನಮಂಡಲದ ಉಭಯ ಸದನಗಳ ಜಂಟಿ ‌ಶಾಸಕಾಂಗ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯು ಮಧ್ಯಂತರ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿದ ಬಳಿಕ  ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ . ಹಾಲಿ ಇರುವ 198 ವಾಡ್9 ಗಳು ಇ‌ನ್ನು ಮುಂದೆ 225 ಕ್ಕೆ ಹೆಚ್ಚಳವಾಗಲಿದೆ‌.8 ವಲಯಗಳು 12ಕ್ಕೆ ಹಾಗೂ ಮೇಯರ್ ಮತ್ತು ಉಪಮೇಯರ್ ಅಧಿಕಾರವಧಿ 12 ತಿಂಗಳ ಬದಲಿಗೆ 30 ತಿಂಗಳಿಗೆ ಬದಲಾಗಲಿದೆ. ಹೀಗೆ ಬಿಬಿಎಂಪಿ ಕಾಯ್ದೆಗೆ ಸಮಗ್ರ ಬದಲಾವಣೆ ಮಾಡುವ ಕಾರಣಕ್ಕಾಗಿ ಮುಂದೂಡಲು ಆಡಳಿತಾಧಿಕಾರಿ ನೇಮಿಸುವ ತೀರ್ಮಾನಕ್ಕೆ ಬಂದಿದೆ.

Facebook Comments

Sri Raghav

Admin