ಮನಸೂರೆಗೊಳ್ಳುತ್ತಿದೆ ಸೋರೆ ಕಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾಗುತ್ತಿರುವುದರ ಬೆನ್ನಲ್ಲೇ ಹಲವಾರು ರೀತಿಯ ನೈಸರ್ಗಿಕ ಉತ್ಪನ್ನಗಳು ಬದಲಿ ಸ್ವರೂಪ ಪಡೆಯುತ್ತಿವೆ. ಇವು ಮನುಷ್ಯನ ಸಾಮಾಜಿಕ ಪ್ರಜ್ಞೆ , ಕಳಕಳಿ ಮತ್ತು ಸೃಜನಾತ್ಮಕತೆಯ ಪ್ರತೀಕ.

ಅದರಲ್ಲೂ ಸೋರೆ ಬುರುಡೆಯ ಕಲೆ ಇತ್ತೀಚಿನ ಪ್ರಯತ್ನ. ಒಣಗಿದ ಸೋರೆ ಬುರುಡೆ ಗಳಿಂದ ಗೊಂಬೆ, ಹೂದಾನಿ, ಗಾಳಿಘಂಟೆ, ಗೋಡೆ ಫಲಕ ಇನ್ನಿತರ ಹಲವಾರು ರೀತಿಯ ಕಲಾಕೃತಿಗಳು, ಗೃಹೋಪಯೋಗಿ ವಸ್ತುಗಳಾದ ಪೆನ್ ಸ್ಟ್ಯಾಂಡ್, ಅಲಂಕಾರಿಕ ಆಭರಣಗಳು, ಅಡುಗೆ ಮನೆಯ ಸಾಂಬಾರ ಪದಾರ್ಥಗಳ ಡಬ್ಬಿ, ಸೌಟು, ಚಮಚ ಎಲ್ಲವೂ ಅರಳುತ್ತಿವೆ. ಕೃಷಿ ಕಲಾ ಎಂಬ ಸಮುದಾಯ ಸಂಸ್ಥೆಯ ಅಡಿಯಲ್ಲಿ.

ಸೋರೆಯ ನಾರಿ…ಸಂಸ್ಥೆಯ ರೂವಾರಿಕೃಷಿ ಉತ್ಪನ್ನಗಳಿಂದ ಸೃಜನಾತ್ಮಕ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಸೀಮಾ ಕೃಷ್ಣ ಪ್ರಸಾದ್ ಅವರಿಗೆ ಪತಿ ಕೃಷ್ಣಪ್ರಸಾದ್ ಅವರೊಂದಿಗೆ ಸಾವಯವ ಕೃಷಿ ಸಂಬಂಧಿತ ಕಾರ್ಯ ನಿರ್ವಹಿಸಿದ ಅನುಭವವಿದೆ. ಬೇರೆ ಬೇರೆ ದೇಶಗಳಿಗೆ ಕಾರ್ಯಾಗಾರಕ್ಕೆಂದು ತೆರಳಿದಾಗ ಅಲ್ಲಿನ ಉತ್ಪನ್ನಗಳಿಂದ ಪ್ರಭಾವಿತರಾದ ಪರಿಣಾಮ ಇಂದು ಮೈಸೂರಿನಲ್ಲಿ ಕೃಷಿಕಲಾ ಜನ್ಮ ತಾಳಿದೆ.

ಆರಂಭದಲ್ಲಿ ಸೋರೆಕಾಯಿಗಳನ್ನು ಒಣಗಿಸಲು ಬೇಕಾದಂತಹ ಸ್ಥಳಾವಕಾಶದ ಕೊರತೆ, ಕೆಲಸಗಾರರ ಅಭಾವ ಇನ್ನಿತರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೂ ತಾವೇ ಸ್ವತಃ ಸುತ್ತಮುತ್ತಲಿನ ಗ್ರಾಮದ ಹೆಣ್ಣುಮಕ್ಕಳಿಗೆ ಕಲೆಯ ತರಬೇತಿ ನೀಡಿ ಅವರೊಳಗಿನ ಸೃಜನಾತ್ಮಕತೆ ಹೊರ ಹೊಮ್ಮಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಈ ಸೋರೆ ಕುಸುರಿಗೆ ಇನ್ನಷ್ಟು ಮೆರುಗು ನೀಡಲು ಆಫ್ರಿಕಾಗೆ ತೆರಳಿ ಮತ್ತಷ್ಟು ಅನುಭವಗಳನ್ನು ಪಡೆದು ಸೋರೆ ಯನ್ನು ವಿವಿಧ ಬಣ್ಣ, ಚಿತ್ತಾರಗಳಿಂದ ಆಕರ್ಷಕ ವಾಗಿದ್ದಾರೆ.ಇವರ ಸೋರೆ ಕಲೆಯನ್ನು ಗುರುತಿಸಿ ಇದೇ ವರ್ಷದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಂದಾಲಾಲ್ ಸೇವಾ ಸಮಿತಿ ಟ್ರಸ್ಟ್‍ನ ವತಿಯಿಂದ ನಂದಾ ದೀಪಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮೈಸೂರಿನಲ್ಲಿ ನಡೆದ ಹಲಸಿನ ಮೇಳದ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿಗೂ ಸೋರೆ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ಪಡೆದಿದ್ದಾರೆ.ಸೋರೆ ಕ್ರಾಂತಿ:ಸಾಮಾಜಿಕ ಕಳಕಳಿ ಹೊಂದಿರುವ ಸೀಮಾ ಕೃಷ್ಣಪ್ರಸಾದ್ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದಾರೆ.ಶಾಲಾ – ಕಾಲೇಜುಗಳಲ್ಲಿ ಸೋರೆ ಬುರುಡೆಯ ಕಲೆಯ ಕಾರ್ಯಾಗಾರವನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

ತಮಿಳುನಾಡಿನ ಪ್ರಾಂತ್ಯದ ಶಾಲೆಯೊಂದರಲ್ಲಿ ಮಕ್ಕಳು ಸ್ವತಃ ತಾವೇ ಬೆಳೆದ ಸೋರೇಕಾಯಿಗಳನ್ನು ಕಲೆಗೆ ಉಪಯೋಗಿಸುವಂತಾಗಿರುವುದು ಇವರ ಶ್ರಮದ ಫಲ.ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಇವರ ಉತ್ಪನ್ನಗಳಲ್ಲಿ ಅಗ್ರಸ್ಥಾನ ಇವರ ಕ್ರಿಯಾಶೀಲತೆಯಿಂದ ಹೊರಬಂದಿರುವ ಲ್ಯಾಂಪ್‍ಗಳು.

ವಿವಿಧ ಬಣ್ಣದ, ವಿವಿಧ ಗಾತ್ರದ, ವಿವಿಧ ರೂಪಿನ ಈ ಲ್ಯಾಂಪ್‍ಗಳು ಚಿತ್ತಾಕರ್ಷಕವಾಗಿವೆ. ಈಗಾಗಲೇ ಹಲವರು ಈ ಲ್ಯಾಂಪ್ ಗಳನ್ನು ತಮ್ಮ ಮನೆಯ ಬಳಕೆಗಲ್ಲದೆ ಮದುವೆ, ಗೃಹಪ್ರವೇಶ ಇನ್ನಿತರ ಸಮಾರಂಭಗಳಲ್ಲಿ ಅತಿಥಿಗಳಿಗೆ ಕೊಡುವ ಉಡುಗೊರೆಯಾಗಿಯೂ ಖರೀದಿಸುತ್ತಿದ್ದಾರೆ.

ಕಳೆದ ವಾರವಷ್ಟೇ ಆಚರಿಸಲಾದ ರಕ್ಷಾ ಬಂಧನದ ರಕ್ಷೆಗಳು ಇವರ ಅಭಿರುಚಿಗೆ ಕೈಗನ್ನಡಿ.ಇವರ ಅಭಿರುಚಿಯ ಪ್ರತೀಕವೆಂಬಂತೆ ಮೈಸೂ ರಿನ ಟಿ.ನರಸೀಪುರ ರಸ್ತೆಯಲ್ಲಿರುವ ಇವರ ಮನೆಯೂ ಕಲಾತ್ಮಕವಾಗಿದೆ.

ಪ್ರೀತಿಯಿಂದ ಆದರಿಸುವ ಇವರ ಮನೆಯಲ್ಲಿನ ಸಾವಯವ ಆಹಾರ ಅತಿಥಿಗಳ ಉದರ ಮತ್ತು ಮನಸ್ಸನ್ನು ಸಂತೃಪ್ತಿಗೊಳಿಸುತ್ತದೆ.ಪರಿಸರ ಸ್ನೇಹಿ ಉತ್ಪನ್ನಗಳು ಕೃಷಿಕಲಾದಲ್ಲಿ ಮತ್ತಷ್ಟು ಮಗದಷ್ಟು ಅರಳುತ್ತಿರಲಿ.
– ಚಂದ್ರಕಲಾ

Facebook Comments