ಗೌತಮ್‍ಕುಮಾರ್ ಜೈನ್ ಬಿಬಿಎಂಪಿ ಹೊಸ ಮೇಯರ್, ಮೋಹನ್ ರಾಜ್ ಉಪಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.1- ಕಡೇ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ 53ನೆ ಮೇಯರ್ ಆಗಿ ಬಿಜೆಪಿಯ ಜೋಗುಪಾಳ್ಯ ವಾರ್ಡ್ ಸದಸ್ಯರಾದ ಗೌತಮ್‍ಕುಮಾರ್ ಜೈನ್, 55ನೆ ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್ ಸದಸ್ಯರಾದ ಮೋಹನ್ ರಾಜ್ ಆಯ್ಕೆಯಾದರು.

ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ಅವರ ನೇತೃತ್ವದಲ್ಲಿ ಬಿಬಿಎಂಪಿ ಕೌನ್ಸಿಲ್ ಹಾಲ್‍ನಲ್ಲಿಂದು ನಡೆದ ಚುನಾವಣೆಯಲ್ಲಿ ಗೌತಮ್‍ಕುಮಾರ್ ಜೈನ್ ಪರ 129 ಮತಗಳು ಬಂದು ಗೆಲುವು ಸಾಧಿಸಿದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ದತ್ತಾತ್ರೇಯ ವಾರ್ಡ್ ಸದಸ್ಯ ಸತ್ಯನಾರಾಯಣ್ ಪರವಾಗಿ 112 ಮತಗಳು ಲಭಿಸಿ ಸೋಲುಂಟಾಯಿತು.

198 ಬಿಬಿಎಂಪಿ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ಮೆಲ್ಮನೆ ಸದಸ್ಯರು ಸೇರಿದಂತೆ 257 ಸದಸ್ಯ ಬಲದ ಬಿಬಿಎಂಪಿಯಲ್ಲಿ 8 ಸದಸ್ಯರು ಗೈರಾಗಿದ್ದರಲ್ಲದೆ ಜೆಡಿಎಸ್‍ನ ದೇವದಾಸ್, ಮಂಜುಳಾ ನಾರಾಯಣಸ್ವಾಮಿ ಅವರು ಮತದಾನದ ಪ್ರಕ್ರಿಯೆಯಿಂದ ಹೊರಗುಳಿದರು.

ನಿರ್ಮಲಾ ಸೀತಾರಾಮನ್, ಜಯರಾಮ್ ರಮೇಶ್, ಡಿ.ಕೆ.ಸುರೇಶ್, ರಘು ಆಚಾರ್, ದಾಸರಹಳ್ಳಿ ಮಂಜುನಾಥ್, ಕೆ.ಸಿ.ರಾಮಮೂರ್ತಿ ಸೇರಿದಂತೆ 8 ಮಂದಿ ಪ್ರಮುಖರು ಗೈರಾಗಿದ್ದರು. ಉಪಮೇಯರ್ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಶಕ್ತಿ ಗಣಪತಿ ನಗರದಿಂದ ಗಂಗಮ್ಮ ರಾಜಣ್ಣ, ಬಿಜೆಪಿ ಅಭ್ಯರ್ಥಿಯಾಗಿ ಮೋಹನ್‍ರಾಜ್ ಅವರು ಸ್ಪರ್ಧಿಸಿದ್ದರು.

ಬಹುಮತ ಪಡೆದ ಮೋಹನ್‍ರಾಜ್ ಅವರ ಹೆಸರನ್ನು ಉಪಮೇಯರ್ ಆಗಿ ಅಧಿಕೃತವಾಗಿ ಘೋಷಿಸಲಾಯಿತು. ಅನರ್ಹ ಶಾಸಕರ ಬೆಂಬಲಿಗ ಕಾಪೆರ್Çರೇಟರ್‍ಗಳು, ಜೆಡಿಎಸ್ ಅತೃಪ್ತ ಸದಸ್ಯರು ಮತ್ತು ಪಕ್ಷೇತರರ ಬೆಂಬಲದೊಂದಿಗೆ ಅಂತಿಮ ವರ್ಷದ ಬಿಬಿಎಂಪಿಯ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಈ ಮೂಲಕ ನಾಲ್ಕು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಇತಿಶ್ರೀ ಹಾಡಲಾಯಿತು. ಕೊನೆ ಕ್ಷಣದವರೆಗೂ ನಡೆದ ರಾಜಕೀಯ ಮೇಲಾಟದಲ್ಲಿ ಗೌತಮ್‍ಕುಮಾರ್ ಜೈನ್ ಮೇಯರ್ ಅಭ್ಯರ್ಥಿಯಾಗಿ, ಉಪಮೇಯರ್ ಅಭ್ಯರ್ಥಿಯಾಗಿ ಮೋಹನ್‍ರಾಜ್ ಅಚ್ಚರಿ ಮೂಡಿಸಿದರು.

ಈ ಬಾರಿ ಒಕ್ಕಲಿಗರಿಗೆ ಮೇಯರ್ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಕೊನೆ ಕ್ಷಣದಲ್ಲಿ ಹುಸಿಯಾಯಿತು. ಮೇಯರ್ ಆಯ್ಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನಡುವಿನ ಪೈಪೋಟಿಯಲ್ಲಿ ರಾಜ್ಯಾಧ್ಯಕ್ಷರ ಕೈ ಮೇಲಾಯಿತು.

ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಹುದ್ದೆಗೆ ಬಿಜೆಪಿಯಿಂದ ಗೌತಮ್‍ಕುಮಾರ್ ಜೈನ್ ಮತ್ತು ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಹುದ್ದೆಗೆ ಗುರುಮೂರ್ತಿ ರೆಡ್ಡಿ, ಮಹಾಲಕ್ಷ್ಮಿ, ಮೋಹನ್‍ರಾಜ್ ಉಮೇದುವಾರಿಕೆ ಸಲ್ಲಿಸಿದ್ದರು.

ಚುನಾವಣೆ ನಡೆಯುವ ಕೊನೆಯ ಎರಡು ನಿಮಿಷದ ಅವಧಿಯಲ್ಲಿ ಪದ್ಮನಾಭರೆಡ್ಡಿ, ಮಹಾಲಕ್ಷ್ಮಿ, ಗುರುಮೂರ್ತಿ ರೆಡ್ಡಿ ಅವರು ಕಣದಿಂದ ಹಿಂದೆ ಸರಿದರು. ಹೀಗಾಗಿ ಮೇಯರ್ ಆಗಿ ಗೌತಮ್‍ಕುಮಾರ್ ಜೈನ್ ಹಾಗೂ ಉಪಮೇಯರ್ ಆಗಿ ಮೋಹನ್‍ರಾಜ್ ಅವರ ಆಯ್ಕೆ ಸುಗಮವಾಯಿತು.

ಕಾಂಗ್ರೆಸ್‍ನಿಂದ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ದತ್ತಾತ್ರೇಯ ವಾರ್ಡ್‍ನ ಸತ್ಯನಾರಾಯಣ್ ಹಾಗೂ ಉಪಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ಶಕ್ತಿ ಗಣಪತಿ ನಗರದ ಗಂಗಮ್ಮ ರಾಜಣ್ಣ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಅವರಿಗೆ ಸೋಲಾಯಿತು.

ಮೇಯರ್ ಹುದ್ದೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಪಕ್ಷದ ವರಿಷ್ಠರು ಕೊನೆ ಕ್ಷಣದವರೆಗೂ ಪ್ರಯತ್ನ ನಡೆಸಿ ಮನವೊಲಿಕೆಯಲ್ಲಿ ಯಶಸ್ವಿಯಾದರು.
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಸಚಿವರಾದ ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಸತೀಶ್‍ರೆಡ್ಡಿ ಸೇರಿದಂತೆ ಹಲವರು ನಡೆಸಿದ ಮಾತುಕತೆ ಪರಿಣಾಮ ಒಮ್ಮತದ ಅಭ್ಯರ್ಥಿ ಆಯ್ಕೆ ಫಲ ನೀಡಿತು.

Facebook Comments

Sri Raghav

Admin