ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ನಾಳೆ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.6- ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳ ಚುನಾವಣೆ ನಾಳೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಬಾರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ರಾಮು, ಬೆಂಗಳೂರು ಉತ್ತರ ವಲಯದ ಉಪತಹಸೀಲ್ದಾರ್ ಕೃಷ್ಣಮೂರ್ತಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ, ಎನ್‍ಪಿಎಸ್ ನೌಕರ ಸಂಘದ ಅಧ್ಯಕ್ಷ ಶಾಂತರಾಮ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಸೋಮಶೇಖರಯ್ಯ, ಶ್ರೀನಿವಾಸ್, ಸಿದ್ದರಾಮಪ್ಪ, ಗಂಗಾಧರ್ ಮತ್ತು ಶಿವರುದ್ರಯ್ಯ ಸ್ಪರ್ಧೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಸ್.ಕೃಷ್ಣಮೂರ್ತಿ ಅವರಿಗೆ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಡಾ.ಪಟೇಲ್ ಪಾಂಡು, ಯೋಗಾನಂದ, ವಿಜಯ್‍ಕುಮಾರ್, ಹಿರಿಯ ಉಪಾಧ್ಯಕ್ಷರಾಗಿದ್ದ ದ್ವಿತೀಯ ಎನ್‍ಪಿಎಸ್ ನೌಕರರ ಸಂಘದ ರಮೇಶ್.ಜಿ ಸಂಘವು ಬೆಂಬಲ ಸೂಚಿಸಿದೆ.

ಹಾಲಿ ಅಧ್ಯಕ್ಷ ಎಚ್.ಕೆ.ರಾಮು ಅವರಿಗೆ ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಭೈರಪ್ಪ, ಸಿಪ್ಪೇಗೌಡ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವು ಜಿಲ್ಲಾಧ್ಯಕ್ಷರು ಈಗಾಗಲೇ ರಾಮು ಅವರಿಗೆ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ. ಸಂಘದ 2019-24ನೇ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಎಲ್ಲಾ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ರಾಜ್ಯ ಪರಿಷತ್ ಸದಸ್ಯರು, ತಾಲ್ಲೂಕು ಯೋಜನಾ ಶಾಖೆಗಳ ಅಧ್ಯಕ್ಷರು ಮತದಾರರಾಗಿದ್ದಾರೆ.

ಸಾಮಾನ್ಯ ಚುನಾವಣೆಗಳಂತೆಯೇ ಈ ಚುನಾವಣೆಯಲ್ಲೂ ಕಣದಲ್ಲಿರುವ ಅಭ್ಯರ್ಥಿಗಳು ಸರ್ಕಾರಿ ನೌಕರರಿಗೆ ಹಲವು ಭರವಸೆಗಳನ್ನು ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲೂ ಮತದಾರರಿಗೆ ಆಮಿಷವೊಡ್ಡುತ್ತಿರುವ ಆರೋಪ ಕೇಳಿಬರುತ್ತಿದೆ.

ಈಗಾಗಲೇ ಸರ್ಕಾರಿ ನೌಕರ ಸಂಘದ ಜಿಲ್ಲಾ ತಾಲ್ಲೂಕು ಶಾಖೆಗಳು, ಯೋಜನಾ ಘಟಕಗಳು, ಬೆಂಗಳೂರು ನಗರದ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ನಡೆದಿವೆ.  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಸ್ಥಾನದ ಚುನಾವಣೆಯಲ್ಲಿ 551 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಇಬ್ಬರು, ಜಿಲ್ಲಾ ಮಟ್ಟದಲ್ಲಿ ಮೂವರು ಹಾಗೂ ಬೆಂಗಳೂರಿನ 100 ಮಂದಿ ಚುನಾಯಿತ ನೌಕರರು ಮತದಾನ ಹಕ್ಕು ಪಡೆದಿದ್ದಾರೆ.
ಆ.7ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೂ ಸಂಘದ ಆವರಣದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿದ ಬಳಿಕ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.

Facebook Comments