ಟೆಂಡರ್ ವಿಳಂಬ, ಸರ್ಕಾರಿ ಆಸ್ಪತ್ರೆಗಳಿಗೆ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ಟೆಂಡರ್ ಪ್ರಕ್ರಿಯೆ ವಿಳಂಬ ಸೇರಿದಂತೆ ಇತರೆ ಕಾರಣಗಳಿಂದಾಗಿ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಆಗಬೇಕಾಗಿದ್ದ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.  ಕರ್ನಾಟಕ ರಾಜ್ಯ ಔಷಧ ಸರಬರಾಜು ಮತ್ತು ಸಂಗ್ರಹಾಗಾರ (ಕೆಡಿಎಲ್‍ಡಬ್ಲುಎಸ್)ದಲ್ಲಿ ಸಮರ್ಪಕ ಔಷಧಗಳ ದಾಸ್ತಾನು ಕೊರತೆಯಿಂದಾಗಿ ಅಧಿಕಾರಿಗಳು ಸಹ ಈಗ ಪೇಚಿಗೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇರಬೇಕಾದ ಜೀವ ರಕ್ಷಕ ಔಷಧಿಗಳ ಕೊರತೆ ಎದುರಾಗಿದ್ದು , ರೋಗಿಗಳಿಗೆ ಉಚಿತವಾಗಿ ನೀಡುವ ವಿಭಾಗದಲ್ಲಿ ವ್ಯತ್ಯಯ ಉಂಟಾಗಿದೆ.
ಹೊರಗಡೆಯಿಂದ ಔಷಧಗಳನ್ನು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯುಮೋನಿಯಾ , ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯದ ರಕ್ತಸ್ರಾವ, ಸಕ್ಕರೆ ಕಾಯಿಲೆ, ಉಸಿರಾಟ, ಅಸ್ತಮಾ, ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳನ್ನು ನಿವಾರಿಸುವ ಮತ್ತು ನಿಯಂತ್ರಿಸುವ ಔಷಧಗಳ ಕೊರತೆ ಇದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಔಷಧಿಗಳು ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ.

ಸುಮಾರು 23 ಜಿಲ್ಲಾ ಕೇಂದ್ರಗಳಿಗೆ, 141 ತಾಲ್ಲೂಕು ಆಸ್ಪತ್ರೆಗಳಿಗೆ, 203 ಸಮುದಾಯ ಆರೋಗ್ಯ ಕೇಂದ್ರ, 2331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿ 3000ಕ್ಕೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ನಡುವೆ ಟೆಂಡರ್ ಪ್ರಕ್ರಿಯೆ ದಿನೇ ದಿನೇ ವಿಳಂಬವಾಗುತ್ತಿರು ವುದರಿಂದ ಆತಂಕ ಹೆಚ್ಚಾಗುತ್ತಿದೆ.

ಬಿಲ್ ಬಾಕಿ ಉಳಿಸಿಕೊಂಡಿರು ವುದರಿಂದ ಔಷಧ ಕಂಪೆನಿಗಳು ಉತ್ಪನ್ನಗಳನ್ನು ನೀಡುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಕಳೆದ 2017ರಲ್ಲಿ 337 ಕೋಟಿ ರೂ., 2018ರಲ್ಲಿ 360 ಕೋಟಿ ರೂ. ಔಷಧಿಗಳನ್ನು ಖರೀದಿಸಲಾಗಿತ್ತು. ಮತ್ತು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿತ್ತು. ಆದರೆ ಈ ಸಾಲಿನಲ್ಲಿ ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ.

Facebook Comments