ನಗರೋತ್ಥಾನ ಅಭಿವೃದ್ಧಿ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಸರ್ಕಾರ ತೀರ್ಮಾನ..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಬಿಬಿಎಂಪಿಯಲ್ಲಿ 2016 ರಿಂದ 2019ರವರೆಗೆ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. 3-11-2016 ರಿಂದ 30-3-2019ರವರೆಗೆ ಸರ್ಕಾರದಿಂದ ಅನುಮೋದನೆಗೊಂಡು ಕಾರ್ಯಾದೇಶ ನೀಡಿರುವ ಯೋಜನೆಗಳ ಗುಣಮಟ್ಟ ತನಿಖೆಗೆ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಕ್ಯಾಪ್ಟನ್ ಆರ್.ಆರ್.ದೊಡ್ಡಿಹಾಳ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಈ ಸಮಿತಿಯು ಎಲ್ಲ ಅವ್ಯವಹಾರಗಳ ತನಿಖೆ ನಡೆಸಿ ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಅವರು ಪೂರ್ವ, ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ, ಮಹದೇವಪುರ, ಆರ್.ಆರ್.ನಗರ, ದಾಸರಹಳ್ಳಿ, ಯಲಹಂಕ ವಿಭಾಗಗಳ ಮುಖ್ಯ ಅಭಿಯಂತರರು ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ,

ಕೆರೆ ಯೋಜನೆ, ಬೃಹತ್ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ಮತ್ತು ಟಿವಿಸಿಸಿಯ ಮುಖ್ಯ ಅಭಿಯಂತರರುಗಳಿಗೆ 2016 ರಿಂದ 2019ರವರೆಗೆ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಪ್ರಗತಿಯ ಕಡತಗಳನ್ನು ದೊಡ್ಡಿಹಾಳ್ ಸಮಿತಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಸದರಿ ತನಿಖೆಗೆ ಅಗತ್ಯ ಸಮನ್ವಯ ಕೈಗೊಳ್ಳುವ ಸಂಬಂಧ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಎನ್.ರಮೇಶ್ ಅವರನ್ನು ಸಮನ್ವಯ ಅಧಿಕಾರಿಯಾಗಿ ನೇಮಿಸಲಾಗಿದೆ.

ಇವರ ಅಧೀನದಲ್ಲಿ ಕಾರ್ಯನಿರ್ವಹಿಸಲು ಗುಣನಿಯಂತ್ರಣ ವಿಭಾಗದ ಕಾರ್ಯಪಾಲಕ ಮಧುಕುಮಾರ್ ಅವರನ್ನು ಸಮನ್ವಯ ಅಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಕಾರ್ಯಪಾಲಕ ಅಭಿಯಂತರರಿಂದ ಮಧುಕುಮಾರ್ ಅವರು ಕಡತಗಳನ್ನು ಪಡೆದುಕೊಂಡು ತನಿಖಾ ಸಂಸ್ಥೆಗೆ ಏಳು ದಿನಗಳೊಳಗೆ ನೀಡಬೇಕು.

ಏಳು ದಿನದೊಳಗೆ ಸಂಬಂಧಪಟ್ಟ ಕಡತಗಳನ್ನು ನೀಡದಿದ್ದರೆ ಅಂತಹ ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತ ಅನಿಲ್‍ಕುಮಾರ್ ಎಚ್ಚರಿಸಿದ್ದಾರೆ.
ಏನಿದು ಅಧಿಕಾರಯುಕ್ತ ಸಮಿತಿ? ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಅಂತಹ ಯೋಜನೆಗಳಿಗೆ ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಬೇಕು.

ಆದರೆ 2016ರಲ್ಲಿ ಸರ್ಕಾರವೇ ಅಧಿಕಾರಯುಕ್ತ ಸಮಿತಿ ರಚನೆ ಮಾಡಿ ಯಾವುದೇ ಯೋಜನೆಗಳನ್ನು ಪಾಲಿಕೆ ಕೌನ್ಸಿಲ್ ಅನುಮೋದನೆ ಪಡೆದುಕೊಳ್ಳದೆ ಏಕಾಏಕಿ ಮಂಜೂರು ನೀಡುತ್ತಿತ್ತು. ಹಾಗಾಗಿ ಈ ಯೋಜನೆಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಎನ್.ಆರ್.ರಮೇಶ್ ಅವರು ಆರೋಪಿಸಿದ್ದರು. ಹಾಗಾಗಿ ಸರ್ಕಾರ ದೊಡ್ಡಿಹಾಳ್ ಸಮಿತಿ ರಚನೆ ಮಾಡಿ ತನಿಖೆಗೆ ಆದೇಶಿಸಿದೆ.

Facebook Comments