ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಸರ್ಕಾರಿ ಜಮೀನು ಒತ್ತುವರಿಯ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳನ್ನು 15 ದಿನಗಳ ಒಳಗಾಗಿ ಪರಾಮರ್ಶೆ ನಡೆಸಬೇಕು. ಒತ್ತುವರಿದಾರರ ಜತೆ ಶಾಮೀಲಾಗಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು, ಗುತ್ತಿಗೆ ಮತ್ತು ಭೋಗ್ಯಕ್ಕೆ ನೀಡಿರುವ ಭೂಮಿಗಳನ್ನು ನಿಯಮ ಪಾಲನೆಯ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಈ ಬಗ್ಗೆ ಸುದೀರ್ಘ ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು, 15 ಅಂಶಗಳನ್ನು ನಮೂದಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ. ಲೆಕ್ಕ ನಿಯಂತ್ರಕರು, ಮಹಾಲೆಕ್ಕಪರಿಶೋಧಕರ ವರದಿ ಆಧರಿಸಿ ವಿಧಾನ ಮಂಡಳದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಜ.7 ಮತ್ತು 14ರಂದು ಸಭೆ ನಡೆಸಿದ್ದು, ಭೂ ಕಬಳಿಕೆದಾರರು ಹಾಗೂ ದುಷ್ಪ್ರೇರಣೆ ನೀಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಪ್ರಕರಣಗಳು ಹಾಗೂ ಇದುವರೆಗೂ ಸ್ವೀಕೃತವಾಗಿರುವ ದೂರುಗಳನ್ನು 15 ದಿನಗಳ ಒಳಗಾಗಿ ಸಂಪೂರ್ಣ ಪರಿಶೀಲನೆ ನಡೆಸಬೇಕು. ನಗರ ಪ್ರದೇಶ, ವಾಣಿಜ್ಯ ಕೈಗಾರಿಕೆ ಹಾಗೂ ಇತರ ಉದ್ಯಮಗಳಿಗೆ ಅನಧಿಕೃತವಾಗಿ ಸರ್ಕಾರಿ ಜಮೀನು ಬಳಸಿರುವ ಒತ್ತುವರಿ ಪ್ರಕರಣಗಳನ್ನು ಅತಿ ಗಂಭೀರ ಎಂದು ಪರಿಗಣಿಸಿ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ನಿಗದಿತ ಗುರಿ ಮತ್ತು ಕಾಲ ಮಿತಿಯಲ್ಲಿ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಅದಿನಿಯಮ 1964 ಕಲಂ 192ಎ, 192 ಬಿ ಅಡಿ ಕ್ರಮ ಜರುಗಿಸಬೇಕು. ಒತ್ತುವರಿ ತೆರವಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವ ಕುರಿತು ಬಂದಿರುವ ದೂರುಗಳನ್ನು ಮತ್ತು ಜಿಲ್ಲಾಧಿಕಾರಿಗಳೇ ಸ್ವತಃ ಗಮನಿಸಿದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕಾಲಮಿತಿ ನಿಗದಿಪಡಿಸಬೇಕು.

ನಕಲಿ ದಾಖಲೆಗಳನ್ನು ಸೃಷ್ಟಿಸಲು ನೆರವಾಗಿರು ವುದು ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತಿನಲ್ಲಿಡಬೇಕು. ಒತ್ತುವರಿ ತೆರವಿಗೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೆ ಅದನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸರ್ಕಾರದ ವಿರುದ್ಧವಾಗಿ ತೀರ್ಪು ಬಂದಿದ್ದರೆ ವಿಳಂಬ ಮಾಡದಂತೆ ಮೇಲ್ಮನವಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗುತ್ತಿಗೆ ಹಾಗೂ ಭೂ ಮಂಜೂರಾತಿ ನೀಡಿರುವ ಭೂಮಿಗಳನ್ನು ಪರಿಶೀಲನೆಗೊಳಪಡಿಸಬೇಕು. ಗುತ್ತಿಗೆ ಅವಧಿ ಮುಗಿದಿದೆಯೇ, ಗುತ್ತಿಗೆ ಹಣ ಪಾವತಿಯಾಗಿದೆಯೇ, ಮಂಜೂರಾದ ಭೂಮಿಯನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗಿದೆಯೇ ಎಂಬೆಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ನಿಯಮಗಳ ಉಲ್ಲಂಘನೆ ಅಥವಾ ಲೋಪಗಳು ಕಂಡು ಬಂದರೆ ಭೂಮಿಯನ್ನು ಮರು ವಶಪಡಿಸಿಕೊಳ್ಳಬೇಕು. ವಶಪಡಿಸಿಕೊಂಡ ಭೂಮಿಗೆ ತಂತಿಬೇಲಿ ಹಾಕಿ ಸುತ್ತಲೂ ಕಂದಕ ನಿರ್ಮಿಸಿ ಸಂರಕ್ಷಿಸಬೇಕು. ಒತ್ತುವರಿದಾರರಿಂದ ದಂಡ ವಸೂಲಿ ಮಾಡಬೇಕು.

ಒತ್ತುವರಿ ತೆರವಿನ ಬಗ್ಗೆ ಪ್ರತಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವ ಬಗ್ಗೆ ಸುತ್ತೋಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಮುಂದೆ ಯಾವುದೇ ನಿರ್ಲಕ್ಷ್ಯತೆ ತೋರದೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ.

Facebook Comments