ಸರ್ಕಾರಿ ಕಚೇರಿಗಳಲ್ಲಿ ಇಂದೇ ನೆರವೇರಿದ ಆಯುಧ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಆಡಳಿತದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ಮಾಡಲಾಯಿತು.ನಾಳೆ ಆಯುಧ ಪೂಜೆ ಅಂಗವಾಗಿ ಸರ್ಕಾರಿ ರಜೆ ಇರುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಇಂದೇ ಪೂಜೆ ನೆರವೇರಿಸಲಾಯಿತು.

ಶುಕ್ರವಾರ ವಿಜಯದಶಮಿ ರಜೆ ಇದೆ. ಎರಡು ದಿನ ರಜೆ ಇರುವ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸ್ವಚ್ಛಗೊಳಿಸಿ, ಹೂವು, ರಂಗೋಲಿ ಹಾಗೂ ತಳಿರು-ತೋರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸಚಿವರ, ಅಧಿಕಾರಿಗಳ ಕಚೇರಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಕಚೇರಿಗಳಲ್ಲಿ ಪೂಜೆ ನೆರವೇರಿಸಿ ಪರಸ್ಪರ ಸಹಿ ವಿನಿಮಯ ಮಾಡಿಕೊಳ್ಳಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಕಚೇರಿಗಳಲ್ಲಿ ಸರಳ ಆಯುಧ ಪೂಜೆ ಮಾಡಲಾಗಿತ್ತು. ಅದೇ ರೀತಿ ಹಲವು ಸಂಘ- ಸಂಸ್ಥೆ ಹಾಗೂ ಕಂಪನಿಗಳಲ್ಲೂ ಇಂದೇ ಆಯುಧ ಪೂಜೆ ಮಾಡಲಾಯಿತು.

Facebook Comments