ಕೊರೊನಾ ದೂರವಾಗುವವರೆಗೂ ಎಚ್ಚರ ವಹಿಸಿ : ಜನತೆಗೆ ರಾಜ್ಯಪಾಲರ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- ರಾಜ್ಯದಲ್ಲಿ ಕೋವಿಡ್ -19 ಕೊನೆಯ ಹಂತದಲ್ಲಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ದೈಹಿಕ ಅಂತರ ,ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಈ ಮೂರು ಮಂತ್ರಗಳನ್ನು ನಿರಂತರವಾಗಿ ಪಾಲನೆ ಮಾಡಬೇಕೆಂದು ಜನತೆಗೆ ರಾಜ್ಯಪಾಲರು ಕರೆ ಕೊಟ್ಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರೂ ಯಾರೊಬ್ಬರೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಅವರು ಸಲಹೆ ಮಾಡಿದ್ದಾರೆ. ಜೊತೆಗೆ ಈಗಷ್ಟೇ ಆರಂಭವಾಗಿರುವ 2021ರಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ. ಈ ವರ್ಷ ಕೊರೊನಾ ಸಂಕಷ್ಟದಿಂದ ಎಲ್ಲರೂ ಹೊರ ಬರೋಣ ಎಂದು ಆಶಿಸಿದರು.

72 ನೇ ಗಣ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಧ್ವಜರೋಹಣ ನೇರವೇರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ 10 ನಿಮಿಷಗಳ ಭಾಷಣದಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತುರ್ತು ಕ್ರಮಗಳು, ಕರ್ನಾಟಕ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಹಾಗೂ ಮುಂದೆ ರಾಜ್ಯದ ಜನತೆಗೆ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ತೆರೆದಿಟ್ಟರು.

ರಾಜ್ಯ ಸರ್ಕಾರ ಸಾರ್ವಜನಿಕರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ ಕೋವಿಡ್-19 ಅಲೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಪಿಪಿಇ ಕಿಟ್, ವೆಂಟಿಲೇಟರ್ ಉತ್ಪಾದನೆ, ಮೂಲಭೂತ ಸೌಕರ್ಯ ಹೆಚ್ಚಳ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಇಂದು ಎರಡು ಲಸಿಕೆಗಳನ್ನು ಉತ್ಪಾದಿಸಿ ವಿದೇಶಗಳಿಗೂ ರಫ್ತು ಮಾಡಲು ಮುಂದಾಗಿದೆ. ಜ.16ರಂದು ವಿಶ್ವದ ಲಸಿಕಾ ಅಭಿಯಾನಕ್ಕೆ ಪ್ರಧಾನಿಯವರು ಚಾಲನೆ ಕೊಟ್ಟಿದ್ದಾರೆ. ಎಲ್ಲರಿಗೂ ಲಸಿಕೆ ತಲುಪಿಸುವಂತೆ ಮುಂದಾಗಬೇಕೆಂದು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸಿದ ವೈದ್ಯರು, ನರ್ಸ್, ಪೊಲೀಸ್ ಸಿಬ್ಬಂದಿ, ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದ ರಾಜ್ಯಪಾಲರು ಅವರೆಲ್ಲರೂ ನಮಗೆ ಹೀರೋಗಳಾಗಿದ್ದಾರೆ ಎಂದು ಸ್ಮರಿಸಿದರು.  ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಉಂಟಾದ ವಿಪತ್ತನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಲ್ಲಿ ಶ್ರಮಿಸಿದ ವಿವಿಧ ಕ್ಷೇತ್ರಗಳ ಸಿಬ್ಬಂದಿ, ಪ್ರಕೃತಿ ವಿಕೋಪ ನಿರ್ವಹಣಾ ತಂಡಗಳು ಹಾಗೂ ಜಿಲ್ಲಾ ಮುಖ್ಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ರಾಜ್ಯದಲ್ಲಿ ಶೇ.75ರಷ್ಟು ಕೃಷಿ ಪ್ರದೇಶವು ಮಳೆಯಾಶ್ರಯದಿಂದ ಕೂಡಿರುವುದರಿಂದ ರೈತರು ಸದಾ ಮಳೆಯನ್ನೇ ಎದುರು ನೋಡುತ್ತಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ವಲಯದಲ್ಲಿ ಬದಲಾವಣೆ ತರಲು ಜಲಾನಯನ ಅಭಿವೃದ್ಧಿಯತ್ತ ಗಮನಹರಿಸಿದೆ. 170 ಕೋಟಿ ಆಯವ್ಯಯವನ್ನು ಒದಗಿಸಿದೆ ಎಂದು ಹೇಳಿದರು. ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆಯನ್ನು ಗ್ರಾಮ ಮಟ್ಟದ ಯುವಕರ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಇದು ನಾಗರಿಕರನ್ನು ಸಶಕ್ತಗೊಳಿಸುವ ಜೊತೆಗೆ ಪ್ರಧಾನಮಂತ್ರಿ ಫಸಲ್‍ಭಿಮಾ ಯೋಜನೆಯಡಿ ರೈತರಿಗೆ ಸಹಾಯಧನ ಸುಲಭವಾಗಿ ದೊರೆಯುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆಯು ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ರೋಗಪತ್ತೆ, ಜಾಡು ಪತ್ತೆ, ತಂತ್ರಜ್ಞಾನ ಮತ್ತು ಚಿಕಿತ್ಸೆ(5ಟಿಗಳು) ಅನುಷ್ಠಾನಗೊಳಿಸಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ದೇಶದಲ್ಲೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ವಾರ್ರೂಮ್ ಮೂಲಕ ಸಂಪರ್ಕ ಪತ್ತೆ, ಕ್ವಾರಂಟೈನ್ ನಿಗಾವಣೆ ಮೂಲಕ ಉತ್ತಮ ತಂತ್ರಜ್ಞಾನದೊಂದಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಆಪ್ತಮಿತ್ರ ಕೋವಿಡ್-19 ಶುಲ್ಕ ರಹಿತ ಸಹಾಯವಾಣಿಯು ಲಕ್ಷಾಂತರ ಆತಂಕಭರಿತ ನಾಗರಿಕರಿಗೆ, ರೋಗಿಗಳಿಗೆ ತಲುಪಿದೆ. ಇದರಿಂದ ಕೋವಿಡ್ ಕುರಿತ ಮಾಹಿತಿ ಪಡೆಯಲು ಅನುಕೂಲವಾಯಿತು ಎಂದು ಹೇಳಿದರು.

ಸರ್ಕಾರ ವಲಸೆ ಕಾರ್ಮಿಕರು ಮತ್ತು ಇತರೆ ಕಾರ್ಮಿಕರ ಹಿತವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. 16 ಲಕ್ಷಕ್ಕಿಂತಲೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದೇ ಬಾರಿ 824.2 ಕೋಟಿ ಆರ್ಥಿಕ ನೆರವು ನೀಡಿದೆ. ಸುಮಾರು 90 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಿದೆ ಎಂದರು.

ರೈತರು, ಅಸಂಘಟಿತ ವಲಯದ ಕಾರ್ಮಿಕರು, ಆಟೋ ಚಾಲಕರು, ನೇಕಾರರು, ಕ್ಷೌರಿಕರು ಒಳಗೊಂಡಂತೆ 63,59,000 ಫಲಾನುಭವಿಗಳಿಗೆ 5,372 ಕೋಟಿ ಹಣಕಾಸಿನ ನೆರವು ಒದಗಿಸಿದೆ. ಜೊತೆಗೆ ಬಿಪಿಎಲ್ ಪಡಿತರಚೀಟಿದಾರರಿಗೆ ಪ್ರಧಾನಿಯವರ ಗರೀಬ್ ಕಲ್ಯಾಣ ಯೋಜನೆ ಪ್ರಯೋಜನವನ್ನು ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮಪಂಚಾಯತಿಗಳಲ್ಲಿ 6544 ಜೀವ ವೈವಿದ್ಯ ನಿರ್ವಹಣಾ ಸಮಿತಿಗಳನ್ನು (ಬಿಎಂಸಿ)ರಚಿಸಲಾಗಿದೆ. 6439 ಜೀವ ವೈವಿದ್ಯ ರಿಜಿಸ್ಟ್ರಾರ್‍ಗಳು ಜೀವ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ. ಕಲಬುರ್ಗಿ ಮತ್ತು ಚಿಂಚೋಳಿ ಎಪಿಎಂಸಿಗಳನ್ನು ಕೇಂದ್ರ ಸರ್ಕಾರದ ಇ-ನಾಮ್ ಪ್ಲಾಟಪಾರ್ಮ್‍ಗೆ ಜೋಡಿಸಲಾಗಿದೆ. ಇನ್ನು ಮೂರು ಎಪಿಎಂಸಿಗಳನ್ನು ಇ-ನಾಮ್ ಪ್ಲಾಟ್ ಪಾರ್ಮ್‍ಗೆ ಜೋಡಿಸಲಾಗುತ್ತದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕ ವನ್ನು ಶೇ.0.06ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.

ಹಣಕಾಸು ಇಲಾಖೆಯು ರಾಜ್ಯಾದ್ಯಂತ ಎಲ್ಲ ಇಲಾಖೆಗಳಲ್ಲಿ ಖಜಾನೆ-2 ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರಿಂದ ಪ್ರತಿಯೊಬ್ಬ ನಾಗರಿಕರು ಆನ್‍ಲೈನ್ ಮೂಲಕ ತೆರಿಗೆಗಳನ್ನು ಪಾವತಿಸಲು ಅನುಕೂಲವಾಗಿದೆ. ಬೆಂಗಳೂರಿನ ಆಚೆಗೂ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಘೋಷಿಸಿದೆ ಎಂದು ರಾಜ್ಯಪಾಲರು ತಿಳಿಸಿದರು.

ರಾಜಧಾನಿ ಬೆಂಗಳೂರಿಗೂ ನಮ್ಮ ಸರ್ಕಾರ ವಿಶೇಷ ಒತ್ತು ಕೊಟ್ಟಿದೆ. ಯಲಚೇನಹಳ್ಳಿಯಿಂದ ಸಿಲ್ಕ್ ಇನ್‍ಸ್ಟಿಟ್ಯೂಟ್‍ವರೆಗೆ 6 ಕಿ.ಮೀ ಮೆಟ್ರೊ ಸಂಚಾರವನ್ನು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮೆಟ್ರೋ 2ನೇ ಹಂತದಲ್ಲಿ 30,645 ಕೋಟಿ ರೂ. ವೆಚ್ಚದಲ್ಲಿ 72.1 ಕಿ.ಮೀ ಮಾರ್ಗ ನಿರ್ಮಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಹಂತ-2ಎ ಮತ್ತು 2ಬಿ ಯೋಜನೆಯಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.

ನಗರದಲ್ಲಿ 8,015 ಕೋಟಿ ಮೊತ್ತದಲ್ಲಿ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ, ಮಳೆನೀರು ಕಾಲುವೆಗಳು, ಘನತ್ಯಾಜ್ಯ ನಿರ್ವಹಣೆ, ರಸ್ತೆಗಳು ಇತರೆ ಮೂಲಭೂತ ಸೌಕರ್ಯಗಳು ಪ್ರಗತಿಯಲ್ಲಿವೆ. ಬಿಡದಿಯಲ್ಲಿ 210 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಎಂಬ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್, ಡಿಜಿ ಪ್ರವೀಣ್ ಸೂದ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮೊದಲಾದವರು ಇದ್ದರು.

Facebook Comments