2022ರೊಳಗೆ ಬೆಂಗಳೂರಿನಲ್ಲಿ 75 ಕಿ.ಮೀ. ಮೆಟ್ರೋ ಮಾರ್ಗ : ರಾಜ್ಯಪಾಲರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2022ರೊಳಗೆ 75 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸುವ ಗುರಿ ರಾಜ್ಯ ಸರ್ಕಾರ ಹೊಂದಿದೆ ಎಂದು ರಾಜ್ಯಪಾಲ ವಿ.ಆರ್.ವಾಲ ಘೋಷಿಸಿದ್ದಾರೆ.  ವಿಧಾನಸಭೆಯಲ್ಲಿ ಇಂದಿನಿಂದ ಆರಂಭವಾದ ಪ್ರಸಕ್ತ ಸಾಲಿನ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಹಂತ-2 ಮತ್ತು ಹಂತ-2ಎ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2022ರ ವೇಳೆಗೆ 75 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ಸ್ವಯಂ ಚಲಾತ ದರ ಸಂಗ್ರಹಣೆಗಾಗಿ ಒಂದು ದೇಶ ಒಂದು ಕಾರ್ಡ್‍ನ್ನು ಬೆಂಗಳೂರು ಮೆಟ್ರೋ ರೈಲು ಮತ್ತು ಬಿಎಂಟಿಸಿಯಲ್ಲಿ ಅನುಷ್ಠಾನ ಮಾಡಲು ಯೋಜಿಸಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ 15,767 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಜನರಿಗೆ ಸುಗಮ ಆಡಳಿತ ನೀಡುವ ಅನುಕೂಲಕ್ಕಾಗಿ ಬಿಬಿಎಂಪಿ ಅಧಿನಿಯಮ ತಿದ್ದುಪಡಿ ಮಾಡಲಾಗಿದೆ. ಜನರ ಜೀವನ ಮಟ್ಟ ಸುಧಾರಿಸಲು ಬೆಂಗಳೂರು ಮಿಷನ್-2020ಯನ್ನು ಜಾರಿ ಮಾಡಲಾಗಿದೆ. ಇದಕ್ಕಾಗಿ ನಗರದಲ್ಲಿ 8015 ಕೋಟಿ ರೂ. ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ ನವನಗರೋತ್ಥಾನ ಕಾರ್ಯಕ್ರಮದಡಿ ರಾಜಕಾಲುವೆಗಳನ್ನು ದುರಸ್ತಿಗೊಳಿಸಲು 1060 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಒಳಚರಂಡಿ ಕಲ್ಪಿಸಲು 1000 ಕೋಟಿ, ನಗರೋತ್ಥಾನ ಮೂರನೇ ಹಂತದಲ್ಲಿ 1598 ಕಾಮಗಾರಿಗಳನ್ನು 263 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.

256 ಎಕರೆ ಪ್ರದೇಶದಲ್ಲಿ 14,909 ವಸತಿ ಘಟಕಗಳನ್ನು ನಿರ್ಮಿಸುವ ಸಲುವಾಗಿ 35 ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 3.15 ಲಕ್ಷ ಪ್ರತ್ಯೇಕ ಗೃಹ ಶೌಚಾಲಯ, ಅಮೃತ್ ಯೋಜನೆಯಡಿ 1680 ಕೋಟಿ ರೂ. ವೆಚ್ಚದ 306 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸ್ಮಾರ್ಟ್ ಸಿಟಿ ಅಭಿಯಾನದಡಿ 7ಸ್ಮಾರ್ಟ್ ಸಿಟಿಗಳಲ್ಲಿ 400ಕೋಟಿ ರೂ. ವೆಚ್ಚದಲ್ಲಿ 162 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 6233 ಕೋಟಿ ರೂ.ಗಳ 345 ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ವಿಶ್ವಬ್ಯಾಂಕ್ ನೆರವಿನ ಕಾರ್ಯಕ್ರಮದಡಿ ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆಗಳಿಗೆ 2,848 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 24/7 ನೀರು ಸರಬರಾಜು ಯೋಜನೆ ಮೇಲ್ದರ್ಜೆಗೆ 1602 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜ್ಯಾದ್ಯಂತ ನೀರು ಸರಬರಾಜು ಯೋಜನೆಗಳನ್ನು, 1103 ಕೋಟಿ ವೆಚ್ಚದಲ್ಲಿ 24 ಒಳಚರಂಡಿಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಡೆದಾಡುವ ದೇವರು ಎಂದೇ ಖ್ಯಾತಿಯಾಗಿರುವ ಸಿದ್ದಗಂಗಾ ಮಠದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟೂರಾದ ರಾಮನಗರ ಜಿಲ್ಲೆಯ ವೀರಪುರದಲ್ಲಿ ಸಂಸ್ಕೃತಿ ಮತ್ತು ಪಾರಂಪರಿಕ ಕೇಂದ್ರವನ್ನು 25 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತದೆ. ಇದೇ ರೀತಿ ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ರಾಮನಗರ ಜಿಲ್ಲೆಯ ಬಾನಂದೂರು ಗ್ರಾಮದಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರವನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಜನ್ಮ ಸ್ಥಳ ಚಿತ್ರದುರ್ಗವನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ ಎಂದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರವು ಎಲ್ಲಾ ಕ್ಷೇತ್ರಗಳಿಗೂ ವಿಶೇಷ ಒತ್ತು ನೀಡುತ್ತಿದ್ದು, ಕರ್ನಾಟಕ ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರ ಹೊಮ್ಮುವ ಆಶಭಾವನೆಯನ್ನು ವ್ಯಕ್ತಪಡಿಸಿದರು.

Facebook Comments