ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ಇಲ್ಲಿದೆ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ಕೋವಿಡ್-19 ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ದೇಶದಲ್ಲೇ ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮೊದಲನೆ ಸ್ಥಾನಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ಸರ್ಕಾರಕ್ಕೆ ಸಹಭಾಶ್‍ಗಿರಿ ನೀಡಿದ್ದಾರೆ.
ಈ ಬಾರಿ ಕೋವಿಡ್-19 ಸಂಕಷ್ಟವಿದ್ದರೂ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ 30,467 ಕೋಟಿ ರೂ. ತೆರಿಗೆ ಹಾಗೂ ಅಬಕಾರಿ ಇಲಾಖೆಯಿಂದ 16,788 ಕೋಟಿ ರೂ. ರಾಜಸ್ವವನ್ನು ಸಂಗ್ರಹಿಸಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಅನುಕೂಲವಾಗಲಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ಇಂದಿನಿಂದ ಆರಂಭವಾದ ಪ್ರಸಕ್ತ ಸಾಲಿನ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ತಮ್ಮ 26 ಪುಟಗಳ ಭಾಷಣದಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು, ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು, ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಹೊಸ ಯೋಜನೆಗಳು, ಕೋವಿಡ್ ನಿಯಂತ್ರಣ, ಮಾದಕ ವಸ್ತುಗಳ ವಿರುದ್ಧ ಸಮರ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದಿದ್ದರೂ ಸರ್ಕಾರ ತನ್ನ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಅನಾವರಣಗೊಳಿಸಿದರು.
ಪ್ರತಿಯೊಬ್ಬ ನಾಗರಿಕರೂ ಆನ್‍ಲೈನ್ ಮೂಲಕ ತೆರಿಗೆ ಪಾವತಿಸಲು ಅನುಕೂಲ ಕಲ್ಪಿಸಲಾಗಿದೆ. ಇದರ ಪರಿಣಾಮ ಹಣಕಾಸು ನಿರ್ವಹಣೆ ಶಿಸ್ತಿಗೆ ಒಳಪಡಲಿದೆ. ಈ ಅಧಿವೇಶನದಲ್ಲಿ ಎಲ್ಲಾ ಸದಸ್ಯರು ವಿಮರ್ಶೆ ಮತ್ತು ಚರ್ಚೆಗಳ ಮೂಲಕ ಪ್ರಸ್ತುತ ಸಂಕಷ್ಟಗಳನ್ನು ಎದುರಿಸಲು ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿ ಕರ್ನಾಟಕವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಮಾಜದಲ್ಲಿ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾದಕ ವಸ್ತುಗಳ ವಿರುದ್ಧ ಸಮರವನ್ನೇ ಸಾರಿದೆ. ಅನೈತಿಕ ವ್ಯವಹಾರ, ಮಾದಕ ವಸ್ತುಗಳ ಸಾಗಣೆ ಮತ್ತು ಸೇವನೆಯಿಂದ ತಡೆಗಟ್ಟುವುದರ ಜತೆಗೆ ನಿಯಂತ್ರಿಸುವುದಕ್ಕಾಗಿ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತದೆ ಎಂದರು.

ಈವರೆಗೂ 4066 ಪ್ರಕರಣಗಳು ದಾಖಲಾಗಿದ್ದು, 34 ಕೋಟಿ ರೂ. ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ರಾಜ್ಯಪಾಲರು ಆಶ್ವಾಸನೆ ಕೊಟ್ಟರು.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ಸಂತ್ರಸ್ತ ಕರೆಗಳಿಗೆ ತುರ್ತು ಸ್ಪಂದನೆ ನೀಡಲು 80 ಕೋಟಿ ರೂ. ವೆಚ್ಚದ ಸೆಂಟ್ರಲ್ ಕಮಾಂಡರ್ ಸೆಂಟರ್ ನಿರ್ಮಾಣಕ್ಕಾಗಿ ಅನುಮೋದನೆ ನೀಡಲಾಗಿದೆ. ಮುಂದಿನ 5 ವರ್ಷದೊಳಗೆ ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ 10ಸಾವಿರ ಪೆÇಲೀಸ್ ವಸತಿ ಗೃಹ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಮಡಿವಾಳದಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ವಿಧಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ನಿರ್ಮಿಸಲಾಗಿದೆ. ಪೆÇಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲು ಗಮನ ಹರಿಸಲಾಗಿದೆ. 2019-20ನೇ ಸಾಲಿನಲ್ಲಿ 603 ಸಬ್ ಇನ್ಸ್‍ಪೆಕ್ಟರ್‍ಗಳು, 3566 ಕಾನ್‍ಸ್ಟೆಬೆಲ್‍ಗಳನ್ನು ನೇಮಕ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 653 ಸಬ್‍ಇನ್ಸ್‍ಪೆಕ್ಟರ್‍ಗಳು, 6685 ಕಾನ್‍ಸ್ಟೆಬೆಲ್‍ಗಳಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಇನ್ನು ಮುಂದೆ ಪೆÇಲೀಸ್ ಇಲಾಖೆಯ ಎಲ್ಲಾ ನೇಮಕಾತಿಗಳಲ್ಲೂ ದೇಹದಾಢ್ರ್ಯತೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರಾಸಸ್ತ್ಯ ನೀಡಲು ಶೇ.2ರಷ್ಟು ಕ್ರೀಡಾಪಟುಗಳ ಕೋಟಾವನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯಪಾಲರು ಘೋಷಣೆ ಮಾಡಿದರು. ಪ್ರಸಕ್ತ ವರ್ಷ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು 1567 ಸಿಬ್ಬಂದಿ ನೇಮಕಾತಿಯನ್ನು ಪ್ರಾರಂಭಿಸಿದೆ. 25 ಕೋಟಿ ವೆಚ್ಚದ 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ಖರೀದಿಗೆ ಅನುಮೋದನೆ ನೀಡಿದೆ. ಅಗ್ನಿ ಅವಘಡಗಳ ವಿರುದ್ಧ ಹೋರಾಟ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ದೇಶದಲ್ಲೇ ಅತ್ಯಂತ ಎತ್ತರದ ಏಣಿ ಇದಾಗಲಿದೆ ಎಂದರು.

ವಿಪತ್ತು ನಿರ್ವಹಣೆ ಮತ್ತು ಕಾರ್ಯಾಚರಣೆಗಳಿಗೆ ಆಧುನಿಕ ರಕ್ಷಣಾ ಸಲಕರಣೆಗಾಗಿ ಸರ್ಕಾರ 30ಕೋಟಿ ರೂ. ನೀಡಿದೆ. ಕಳೆದ ವರ್ಷ ರಾಜ್ಯದ ವಿವಿಧ ಕಡೆ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆ, ಎಸ್‍ಡಿಆರ್‍ಎಫ್ ಜತೆಗೆ ಭಾರತೀಯ ವಾಯು ಪಡೆಯ ನಾಲ್ಕು ಹೆಲಿಕಾಫ್ಟರ್‍ಗಳು, 16 ಎನ್‍ಡಿಆರ್‍ಎಫ್ ತಂಡ ಹಾಗೂ ನಾಲ್ಕು ಸೇನಾ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು ಎಂದು ವಿವರಿಸಿದರು.

ರಕ್ಷಣಾ ತಂಡ 5016 ಜನರನ್ನು ರಕ್ಷಿಸಿ 52,253 ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡಿದೆ. 313 ಪರಿಹಾರ ಶಿಬಿರ, 27,773 ಪ್ರವಾಹ ಪೀಡಿತ ಪ್ರತಿ ಕುಟುಂಬಗಳಿಗೆ 10ಸಾವಿರ ರೂ. ಪೈಕಿ 6200 ರೂ. ನೀಡಲಾಗಿದೆ. ಸಂಪೂರ್ಣವಾಗಿ ಹಾನಿಗೊಂಡ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ, ಹೆಚ್ಚಿನ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ 3 ಲಕ್ಷ ಹಾಗೂ ಭಾಗಶಃ ಹಾನಿಗೊಂಡ ಮನೆಗಳ ನಿರ್ಮಾಣಕ್ಕೆ 50ಸಾವಿರ ಸೇರಿದಂತೆ ಒಟ್ಟು ಗೃಹ ನಿರ್ಮಾಣಕ್ಕೆ 152 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

9,22,605 ಪ್ರವಾಹ ಪೀಡಿತ ರೈತರ ಬ್ಯಾಂಕ್ ಖಾತೆಗಳಿಗೆ 710 ಕೋಟಿ ರೂ.ಗಳ ಸಹಾಯಧನ ವಿತರಿಸಿದೆ. ರಸ್ತೆಗಳು, ಶಾಲೆಗಳು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳ ದುರಸ್ತಿ ಕಾರ್ಯಕ್ಕೆ 423 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಒಟ್ಟು 1345 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ನನ್ನ ಶಾಲೆ ನನ್ನ ಕೊಡುಗೆ: ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸುದೆ್ದುೀಶದಿಂದ ಸರ್ಕಾರ ಶಿಕ್ಷಕರು ಮತ್ತು ಪೋಷಕರ ಸಹಾಯವಾಣಿ ಜತೆಗೆ ಶಿಕ್ಷಕ ಮಿತ್ರ ಮತ್ತು ಮಕ್ಕಳ ವಾಣಿ ಯೂಟೂಬ್ ವಾಹಿನಿಯನ್ನು ಪ್ರಾರಂಭಿಸಿರುವುದು ರಾಷ್ಟ್ರದ ಗಮನ ಸೆಳೆದಿದೆ ಎಂದು ರಾಜ್ಯಪಾಲರು ಪ್ರಶಂಸಿದಿರು.

ಹಳೆಯ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆಗಳನ್ನು ಸಂಗ್ರಹಿಸಲು ನನ್ನ ಶಾಲೆ ನನ್ನ ಕೊಡುಗೆ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಜನಪ್ರತಿನಿಧಿಗಳು, ಸಮುದಾಯದ ನಾಯಕರು ಹಾಗೂ ಸ್ವಯಂ ಸೇವಾ ಸಂಘ-ಸಂಸ್ಥೆಗಳು ಒಂದೂವರೆ ಸಾವಿರ ಶಾಲೆಗಳನ್ನು ದತ್ತು ಪಡೆದಿವೆ ಎಂದರು.

ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದು, ಕಲಿಕಾ ನಿರ್ವಹಣಾ ವ್ಯವಸ್ಥೆ ಆರಂಭಿಸಿದೆ. ಆ್ಯಪ್ ಮೂಲಕ ವಿಷಯ ಪ್ರವೇಶ ಮಾಡುವುದು ಮತ್ತು ಸ್ಮಾರ್ಟ್ ತರಗತಿಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. 150 ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಉನ್ನತಿಕರಣಕ್ಕಾಗಿ ಟಾಟಾ ಟೆಕ್ನಾಲಜಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಇದು ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಪುರಸ್ಕøತ ಯೋಜನೆಯಲ್ಲಿ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ 325 ಕೋಟಿ ರೂ. ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅನುಮೋದಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 300 ಹಾಸಿಗೆಯ ಸಾಮಥ್ರ್ಯದ ಶ್ರೀ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು 600 ಕೋಟಿ ಮಂಜೂರು ಮಾಡಿದ್ದು, ಈಗಾಗಲೇ 100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದ ವಿವಿಧೆಡೆ ವಿಮಾನ ನಿಲ್ದಾಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಬೀದರ್‍ನಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿದ್ದರೆ, ಶಿವಮೊಗ್ಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 28 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉತ್ತರ ಕರ್ನಾಟಕ ಜಿಲ್ಲೆಯ ನೌಕಾ ವಾಯು ಪ್ರದೇಶದ ಪಕ್ಕದಲ್ಲಿ ಸಿವಿಲ್ ಎನ್‍ಕ್ಲೇವ್ ಅಭಿವೃದ್ಧಿ ಪ್ರಗತಿಯಲ್ಲಿದೆ. ಅಲ್ಲದೆ, 220 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಒಂದು ಲಕ್ಷ ಗೃಹ ನಿರ್ಮಾಣ ಯೋಜನೆಯಡಿ ಮೊದಲ ಹಂತದಲ್ಲಿ 46,499 ಮನೆಗಳ ಪೈಕಿ 31,382 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 4,460 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯಗಳೊಂದಿಗೆ 83,119 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ರಾಜೀವ್ ಆವಾಜ್ ಯೋಜನೆಯಡಿ 1300 ಕೋಟಿ ರೂ. ವೆಚ್ಚದಲ್ಲಿ 19,897 ಮನೆಗಳ ನಿರ್ಮಾಣಕ್ಕಾಗಿ 7 ಯೋಜನೆಗಳನ್ನು ರೂಪಿಸಲಾಗಿದೆ. 1818 ಕೊಳಚೆ ಪ್ರದೇಶದಲ್ಲಿ 3.36 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ನಗರ ಪ್ರದೇಶದಲ್ಲಿ 74,574 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 48,161 ನಿವೇಶನಗಳ ಹಂಚಿಕೆಗೆ ಸಿದ್ದಪಡಿಸಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಜಿಲ್ಲಾ ಮಟ್ಟದ ಕಚೇರಿಗಳವರೆಗೆ ಇ-ಕಚೇರಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಜನಸೇವಕ ಉಪಕ್ರಮ ಆರಂಭಿಸಿರುವುದರಿಂದ 42ಸಾವಿರ ಸೇವೆಗಳನ್ನು ನಾಗರಿಕರು ಪಡೆದುಕೊಂಡಿದ್ದಾರೆ. ಗ್ರಾಮ ಒನ್ ಮೂಲಕ ಗ್ರಾಮ ಮಟ್ಟದಲ್ಲಿ ಎಲ್ಲರಿಗೂ ಒಂದೇ ಸ್ಥಳದಲ್ಲಿ ನೆರವು ಕೇಂದ್ರವನ್ನಾಗಿ ರೂಪಿಸಲಾಗಿದೆ ಎಂದರು.

ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಗಿದ್ದು, ಸುಮಾರು 20 ಲಕ್ಷ ಉದ್ಯೋಗ, 5ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 53,295 ಕೋಟಿ ರೂ.ಗಳ ಹೂಡಿಕೆಯೊಂದಿಗೆ 1.54 ಲಕ್ಷ ಉದ್ಯೋಗವನ್ನು ಸೃಷ್ಟಿಸುವ 366 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಹಳ್ಳ, ಕೆರೆ, ಸರೋವರಗಳಲ್ಲಿ ದೊರೆಯುವ ಮರಳನ್ನು ಮಾರಾಟ ಮಾಡಲು ಹೊಸ ಮರಳು ನೀತಿ ಜಾರಿ ಮಾಡಲಾಗಿದೆ. ಕರ್ನಾಟಕ ಕಲ್ಲು ಪುಡಿ ಘಟಕಗಳ ನಿಯಂತ್ರಣ 2011ಕ್ಕೂ ತಿದ್ದುಪಡಿ ಮಾಡಲಾಗಿದೆ. ಹೀಗೆ ರಾಜ್ಯಪಾಲರು ತಮ್ಮ 26 ಪುಟಗಳ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಪ್ರಶಂಸಿಸಿದರು.

Facebook Comments