ಇಲ್ಲಿದೆ ರಾಜ್ಯಪಾಲರ ಗಣರಾಜ್ಯೋತ್ಸವ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಂಬಂಧ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಲಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಮಾಣಿಕ್‍ಷಾಪರೇಡ್ ಮೈದಾದಲ್ಲಿಂದು 71ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ನಾಡಿನ ಸಮಸ್ತ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಅವರು, ಅಪರಾಧನಗಳನ್ನು ತಡೆಯುವ ಹಾಗೂ ಅವುಗಳ ತನಿಖೆಯನ್ನು ತುರ್ತಾಗಿ ಕೈಗೊಳ್ಳಲು ಪೊಲೀಸ್ ಇಲಾಖೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯಪದ್ಧತಿಗಳಿಂದ ಸುಸಜ್ಜಿತಗೊಳಿಸಲಾಗುತ್ತಿದೆ ಎಂದರು.

ನಮ್ಮ ದೇಶದ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮ ಪಡುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಪುನರ್ ದೃಢೀಕರಿಸುವ ಸುಸಂದರ್ಭವಾಗಿದೆ. ಮೂಲಭೂತ ಕರ್ತವ್ಯಗಳ ಆಂದೋಲನವನ್ನು ದೇಶಾದ್ಯಂತ ಆಯೋಜಿಸುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾಗಿ ನಮ್ಮ ಕರ್ತವ್ಯಗಳ ಬಗ್ಗೆ ಗಮನ ಹರಿಸಲು ಸೂಕ್ತ ಕಾಲವಾಗಿದೆ. ದೇಶದಲ್ಲಿ ಅಪಾರವಾದ ಸಾಮಥ್ರ್ಯ, ಪರಂಪರೆ, ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವುದರೊಂದಿಗೆ ಪ್ರಯೋಜನಕ್ಕೆ ಬಾರದ ಕಲ್ಪನೆ ಮತ್ತು ಮೂಡನಂಬಿಕೆಗಳನ್ನು ತ್ಯಜಿಸಬೇಕು. ವೈಜ್ಞಾನಿಕ, ಏಕತಾ ಮತ್ತು ಅರ್ಪಣಾ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ನಮ್ಮ ದೇಶವನ್ನು ಪುನರ್ ನಿರ್ಮಾಣ ಮಾಡಿದ ಅಸಂಖ್ಯಾತ ಜನರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತೇವೆಂದು ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ನೈತಿಕ ಶಿಕ್ಷಣ ಬೇಕು: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಮಧ್ಯ ರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ಓಡಾಡಬಹುದಾದ ದಿನವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ನಂಬಿದ್ದರು. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಟ್ಟಿರುವುದನ್ನು ಕಾತ್ರಿಪಡಿಸಲು ಪುರುಷರು, ಬಾಲಕರಿಗೆ ಮಹಿಳೆಯರು ಮತ್ತು ಹೆಣ್ಣುಮಕ್ಕಳೊಂದಿಗೆ ಯಾವ ರೀತಿಯಲ್ಲಿ ಗೌರವದಿಂದ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸುವ ಶಿಕ್ಷಣ ನೀಡಬೇಕಾಗಿದೆ ಎಂದು ಸಲಹೆ ಮಾಡಿದರು.

ಉತ್ತಮ ಆಡಳಿತ ನಿರ್ವಹಣಾ ಸೂಚ್ಯಾಂಕದಲ್ಲಿ ರಾಜ್ಯ ಮೂರನೆ ಸ್ಥಾನ ಪಡೆಯುವ ಮೂಲಕ ಮುಂಚೂಣಿ ರಾಜ್ಯವಾಗಿರುವುದಲ್ಲದೆ, ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಭಾರತದ ರಾಜ್ಯ ಅರಣ್ಯ ವರದಿ 2019ರ ಪ್ರಕಾರ ಅರಣ್ಯ ಪ್ರದೇಶ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅಕ್ಟೋಬರ್ ಅಂತ್ಯದವರೆಗೆ 2.82 ಕೋಟಿ ಸಸಿಗಳನ್ನು ನೆಡುವ ಮೂಲಕ 41,325 ಹೆಕ್ಟೇರ್‍ಗಳಷ್ಟು ನೆಡು ತೋಪುಗಳನ್ನು ಹೆಚ್ಚಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಮನ್ವಯಗೊಳಿಸಿ ನೂರು ಪರಪೀಡಿತ ತಾಲ್ಲೂಕುಗಳಲ್ಲಿ ಬರ ತಡೆಯಲು ಜಲಾನಯನ ಅಭಿವೃದ್ಧಿ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಲ್ಲಾ ಅರ್ಹ ರೈತರಿಗೆ ವಾರ್ಷಿಕ 10ಸಾವಿರ ರೂ.ಗಳನ್ನು ಅವರ ಖಾತೆಗೆ ನೇರವಾಗಿ ನೀಡಲಾಗುತ್ತಿದೆ.

ಸಹಕಾರಿ ಬ್ಯಾಂಕುಗಳ ಒಂದು ಲಕ್ಷ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳ ಎರಡು ಲಕ್ಷವರೆಗಿನ ಸಾಲ ಮನ್ನಾ ಯೋಜನೆ ಮಾರ್ಚ್ ತಿಂಗಳ ವೇಳೆಗೆ ಮುಕ್ತಾಯಗೊಳ್ಳಲಿದೆ. ಈ ಯೋಜನೆಯಿಂದ 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದರು. ಕೃಷ್ಣ ಮೇಲ್ದಂಡೆ ಯೋಜನೆ ಹಂತ 3ರ ಕಾಮಗಾರಿ ಪ್ರಗತಿಯನ್ನು ತ್ವರಿತಗೊಳಿಸಲಾಗಿದೆ. 5500 ಕೋಟಿ ರೂ. ವೆಚ್ಚದಲ್ಲಿ 12 ಕೆರೆ ತುಂಬಿಸುವ ಇತರೆ 20 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆ ಸಮಾವೇಶ: ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. 2019ರಲ್ಲಿ 5774 ಕೋಟಿ ರೂ. ಬಂಡವಾಳವನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ರಾಜ್ಯ ಎರಡನೇ ಬಂಡವಾಳ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ. ಕಳೆದ ನವೆಂಬರ್‍ನಲ್ಲಿ ಕರ್ನಾಟಕ ನಾವಿನ್ಯ ಪ್ರಾಧಿಕಾರವನ್ನು ಸ್ಥಾಪಿಸಿದ್ದು, ನವೋದ್ಯಮಗಳ ದೂರದೃಷ್ಟಿ ಗುಂಪುಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಪಾವಗಡದಲ್ಲಿ 250 ಮೆಗಾವ್ಯಾಟ್ ಸಾಮಥ್ರ್ಯದ ಅಲ್ಟ್ರಾ ಮೆಗಾ ಸೋಲಾರ್ ಪಾರ್ಕ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ ಎಂದು ರಾಜ್ಯಪಾಲರು ತಿಳಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟ್‍ಲ್ ಮೂಲಕ 25 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತಿದೆ. ಚಿಕ್ಕಮಗಳೂರು, ಯಾದಗಿರಿ, ಹಾವೇರಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿ 600 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ 36,445 ಕೋಟಿ ರೂ.ಗಳ ಉಪಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ವಜುಭಾಯಿ ವಾಲಾ ವಿವರಿಸಿದರು.

#118 ವರ್ಷಗಳಲ್ಲೇ ಕಂಡರಿಯದಂತಹ ನೆರೆ ಹಾವಳಿಗೆ ಉದಾರ ನೆರವು  
ಬೆಂಗಳೂರು, ಜ.26- ಕಳೆದ ಆಗಸ್ಟ್ ತಿಂಗಳಿನಲ್ಲಿ 118 ವರ್ಷಗಳಲ್ಲೇ ಕಂಡರಿಯದಂತಹ ಭಾರೀ ಮಳೆ ಹಾಗೂ ನೆರೆ ಹಾವಳಿಗೆ ಒಳಗಾದ ಜನರ ನೆರವಿಗೆ ಉದಾರ ನೆರವು ನೀಡಿದವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಧನ್ಯವಾದ ಅರ್ಪಿಸಿದರು.

ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು 71ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರೀ ಮಳೆ ಹಾಗೂ ಕೃಷ್ಣಾ, ಭೀಮ ನದಿ ಕೊಳ್ಳದ ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿ ರಾಜ್ಯದ ಹಲವು ಜಿಲ್ಲೆಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಂತಾಯಿತು.

ಇದು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ಮುಂದುವರೆದು ನಾಡಿನ ಜತೆ ಹೇಳಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಸಿಲುಕಿ ಸ್ವತ್ತು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಭಾರೀ ಪ್ರಮಾಣದ ಹಾನಿ ಉಂಟಾಯಿತು. ಇಂತಹ ಸಂದರ್ಭದಲ್ಲಿ ಹಲವಾರು ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಣಕಾಸು ಹಾಗೂ ವಸ್ತುವಿನ ರೂಪದಲ್ಲಿ ನೆರವು ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಂದ ಜಂಟಿ ರಕ್ಷಣಾ ತಂಡಗಳ ಮೂಲಕ 7 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಸಂಕಷ್ಟಕ್ಕೀಡಾದ 2.07 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರ ಪರಿಹಾರವನ್ನು ಸರ್ಕಾರ ನೀಡಿದೆ. ಮನೆಗಳ ಪುನರ್ ನಿರ್ಮಾಣಕ್ಕಾಗಿ 5 ಲಕ್ಷ, ಭಾಗಶಃ ಹಾನಿಗೀಡದ ಮನೆಗಳಿಗೆ 50ಸಾವಿರ ಮಂಜೂರು ಮಾಡಿದ್ದು, ಇದು ರಾಷ್ಟ್ರೀಯ ವಿಪತ್ತು ನಿಧಿ ಮಾನದಂಡಗಳಿಗಿಂತ ಹೆಚ್ಚಾಗಿದ್ದು, ರಾಜ್ಯ ಸರ್ಕಾರವೇ ಭರಿಸಿದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

# ಬೆಂಗಳೂರಿನ ಸುತ್ತಮುತ್ತಲಿನ 156 ಕಿ.ಮೀ. ಪರ್ಯಾಯ ರಸ್ತೆ
ಬೆಂಗಳೂರು, ಜ.26- ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸಲು ಮತ್ತು ಬೆಂಗಳೂರಿನ ಸುತ್ತಮುತ್ತಲಿನ 156 ಕಿ.ಮೀ. ಪರ್ಯಾಯ ರಸ್ತೆಗಳ ಅಗಲೀಕರಣ ಮತ್ತು ಸುಧಾರಣೆಗೆ ಅನುಮೋದನೆ ನೀಡಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ತಿಳಿಸಿದರು. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು 71ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 18,621 ಕೋಟಿ ರೂ,ಗಳ ವೆಚ್ಚದಲ್ಲಿ 148 ಕಿ.ಮೀ.ಗಳ ಬೆಂಗಳೂರು ಉಪನಗರ ರೈಲು ಜಾಲದ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ 10 ಸಾವಿರ ಕಿ.ಮೀ. ಹೆದ್ದಾರಿ ಸುಧಾರಣೆಗೆ ಅನುಮೋದನೆ ದೊರೆತಿದ್ದು, ಮೊದಲ ಹಂತದಲ್ಲಿ 3692 ಕಿ.ಮೀ. ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಲು ಬೆಂಗಳೂರಿನಲ್ಲಿ 92 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಜ.1ರಿಂದ ರಾಜ್ಯದ ಎಲ್ಲಾ ಸಚಿವಾಲಯ, ಪ್ರಮುಖ ಇಲಾಖೆ ಕಚೇರಿಗಳಲ್ಲಿ ಇ-ಕಚೇರಿ ಉಪ ಕ್ರಮವನ್ನು ಆರಂಭಿಸಿದ್ದು, ಇ-ಗೆಜೆಟ್ ಪ್ರಕಟಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

 

Facebook Comments