ರಾಜ್ಯಪಾಲರ ಸೂಚನೆಗೆ ಕ್ಯಾರೆ ಎನ್ನದ ದೋಸ್ತಿ ಸರ್ಕಾರ , ಕೇಂದ್ರಕ್ಕೆ ವರದಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.20-  ಎರಡು ಬಾರಿ ಮುಖ್ಯಮಂತ್ರಿಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚನೆ ಕೊಟ್ಟರೂ ಪಾಲಿಸದೆ ಉಲ್ಲಂಘನೆ ಮಾಡಲಾಗಿದೆ. ಕರ್ನಾಟಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲ ವರದಿ ನೀಡಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿಗೆ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಸಂಪೂರ್ಣ ವರದಿ ಸಲ್ಲಿಸಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು, ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಸೂಚನೆ ಕೊಟ್ಟರೂ ಉಲ್ಲಂಘನೆ ಮಾಡುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ರಾಜಭವನದ ವಿಶೇಷ ಕಾರ್ಯದರ್ಶಿ ರಮೇಶ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರುಗಳು ಪ್ರತ್ಯೇಕವಾಗಿ ನೀಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ಕೇಂದ್ರಕ್ಕೆ ತಮ್ಮದೇ ಆದ ಪ್ರತ್ಯೇಕ ವರದಿಯನ್ನು ನೀಡಿದ್ದಾರೆ.

ಕಳೆದ ಜು.1 ಹಾಗೂ 6 ಮತ್ತು 13ರಂದು ಕಾಂಗ್ರೆಸ್-ಜೆಡಿಎಸ್‍ನ ಒಟ್ಟು 15 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನನ್ನ ಬಳಿ ಬಂದರು. ವಿಧಾನಸಭೆ ಸ್ಪೀಕರ್ ಇಲ್ಲದ ಕಾರಣ ಅವರ ಕಾರ್ಯದರ್ಶಿಗೆ ನೀಡಿದ್ದರ ಕುರಿತು ಹಸ್ತಪ್ರತಿಯನ್ನು ಕೊಟ್ಟಿದ್ದಾರೆ.

ಇದರ ಜೊತೆಗೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಬೆಂಬಲ ವಾಪಸ್ ತೆಗೆದುಕೊಂಡಿರುವುದಾಗಿ ಪತ್ರ ನೀಡಿದ್ದಾರೆ. ಅಲ್ಲದೆ ಮುಂದೆ ಬಿಜೆಪಿಗೆ ಬೆಂಬಲ ನೀಡಿರುವ ಬಗ್ಗೆ ಸಲ್ಲಿಸಿದ ಪತ್ರವನ್ನು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 224 ಸದಸ್ಯರ ಪೈಕಿ ಪ್ರಸ್ತುತ ಸಮ್ಮಿಶ್ರ ಸರ್ಕಾರ 102 ಸದಸ್ಯರನ್ನು ಹೊಂದಿದೆ. ಯಾವುದೇ ಸರ್ಕಾರಕ್ಕೆ ಸರಳ ಬಹುಮತವಾಗಿ 113 ಸದಸ್ಯರನ್ನು ಹೊಂದಿರಬೇಕು. ಇಲ್ಲಿ ಸಮ್ಮಿಶ್ರಸರ್ಕಾರದ ಶಾಸಕರು ರಾಜೀನಾಮೆ ನೀಡಿದ ದಿನವೇ ಅಲ್ಪಮತಕ್ಕೆ ಕುಸಿದಿದೆ.

ಸರ್ಕಾರ ಬಹುಮತ ಕಳೆದುಕೊಂಡಾಗ ಯಾವುದೇ ರೀತಿಯ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಬಾರದೆಂಬ ನಿಯಮವಿದೆ. ಈ ಬಗ್ಗೆ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸೂಚನೆ ಕೊಟ್ಟಿದ್ದೆ. ಆದರೂ ನನ್ನ ಸೂಚನೆಯನ್ನು ಧಿಕ್ಕರಿಸಿ ಅಧಿಕಾರಿಗಳ ವರ್ಗಾವಣೆ ಮತ್ತು ಕೆಲವು ನೀತಿ ನಿರೂಪಣೆ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ.

ಪ್ರಸ್ತುತ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಇರುವ ಬಹುಮತವನ್ನು ಶುಕ್ರವಾರ 1.30ರೊಳಗೆ ಸಾಬೀತುಪಡಿಸುವಂತೆ ಸೂಚನೆ ಕೊಟ್ಟಿದ್ದೆ. ಅದನ್ನು ಕೂಡ ಉಲ್ಲಂಘಿಸಲಾಗಿದೆ. ಪುನಃ 2ನೇ ಬಾರಿ ಬಹುಮತ ಸಾಬೀತಿಗೆ ಸಂಜೆ 6 ಗಂಟೆಗೆ ಗಡುವು ನೀಡಲಾಗಿತ್ತು.

ಆದರೆ ಮುಖ್ಯಮಂತ್ರಿಗಳು ಉದ್ದೇಶಪೂರ್ವಕವಾಗಿ ನನ್ನ ಸೂಚನೆಯನ್ನು ಉಲ್ಲಂಘನೆ ಮಾಡಿರುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದ್ದಾರೆ.

ಯಾವುದೇ ರಾಜ್ಯ ಸರ್ಕಾರ ಅಲ್ಪ ಮತಕ್ಕೆ ಕುಸಿದ ವೇಳೆ ಕಾರ್ಯಾಂಗದ ಮುಖ್ಯಸ್ಥನಾದ ನಾನು ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ಒಬ್ಬ ರಾಜ್ಯಪಾಲರಾಗಿ ನಾನು ಯಾವೆಲ್ಲ ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನು ತೆಗೆದುಕೊಂಡಿದ್ದೇನೆ. ರಾಜ್ಯಪಾಲರ ಆದೇಶವನ್ನೇ ಉಲ್ಲಂಘಿಸುತ್ತಾರೆಂದರೆ ನಾನು ಕಟ್ಟಿ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರವೇಶಕ್ಕೆ ಒತ್ತಾಯ: ರಾಜ್ಯಪಾಲ ವಿ.ಆರ್.ವಾಲಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ನೀಡಿರುವ ವರದಿಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎನ್ನುವ ಮೂಲಕ ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತಕ್ಕೆ ಷರಾ ಬರೆಯಲು ಮುಂದಾಗಿದ್ದಾರೆ.

ಸಂಖ್ಯಾಬಲ ಇಲ್ಲ ಎಂದ ಮೇಲೆ ಸರ್ಕಾರ ಆಡಳಿತದಲ್ಲಿ ಮುಂದುವರೆಯುವುದೇ ತಪ್ಪು. ಅಧಿವೇಶನದಲ್ಲಿ ಕೇವಲ ಕಾಲಹರಣ ಮಾಡುತ್ತಿದ್ದಾರೆ ಹೊರತು ವಿಶ್ವಾಸ ಮತಯಾಚನೆ ಮಾಡುತ್ತಿಲ್ಲ. ಇದು ಕಾನೂನು ಬಿಕಟ್ಟಿನ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಪ್ರಸ್ತುತ ಕಾಂಗ್ರೆಸ್-ಜೆಡಿಎಸ್‍ನಿಂದ 15 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇಬ್ಬರು ಶಾಸಕರು ಅನಾರೋಗ್ಯದ ಹಿನ್ನೆಲೆಯಲ್ಲಿ ಸದನಕ್ಕೆ ಗೈರು ಹಾಜರಾಗಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

Facebook Comments