ಮದ್ಯದಂಗಡಿ ಮಾಲೀಕರಿಂದಲೇ ರಸ್ತೆ ನಿರ್ವಹಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.9- ಮದ್ಯದ ಅಂಗಡಿಗಳಿಗೆ ಅನುಕೂಲ ಮಾಡಿ ಕೊಡುವ ಸಲುವಾಗಿ ಕೆಳದರ್ಜೆಗಿಳಿಸಲಾದ ರಸ್ತೆಗಳ ನಿರ್ವಹಣಾ ವೆಚ್ಚವನ್ನು ಮದ್ಯದಂಗಡಿಗಳ ಮಾಲೀಕರಿಂದಲೇ ವಸೂಲಿ ಮಾಡಲು ಪರಿಶೀಲನೆ ನಡೆಸುವುದಾಗಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಬಂಡೆಪ್ಪ ಕಾಶ್ಯಂಪುರ್ ಪರವಾಗಿ ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಶ್ನೆ ಕೇಳಿ, ಮನ್ನಕೇಳಿ ಗ್ರಾಮದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆ ನಿರ್ಮಾಣ ಪೂರ್ಣಗೊಂಡು ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದರು. ಅಷ್ಟೇ ಅಲ್ಲದೆ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ಹೆದ್ದಾರಿ ಪ್ರಾಧಿಕಾರದವರು ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಿಕೊಂಡು ಹೋಗುತ್ತಿದ್ದಾರೆ. ಈ ಮೊದಲು ಸಂಚರಿಸುತ್ತಿದ್ದ ಹಳೆ ರಸ್ತೆಯನ್ನು ಹೆದ್ದಾರಿಗಿಂತ ಕೆಳದರ್ಜೆಗಿಳಿಸಲಾಗಿದೆ. ಈ ರೀತಿಯ ರಸ್ತೆಗಳನ್ನು ಯಾರು ನಿರ್ವಹಣೆ ಮಾಡುವವರು ಇಲ್ಲದೆ ಗುಂಡಿಗಳು ಹೆಚ್ಚಾಗಿವೆ. ಸಂಚರಿಸಲಾಗದೆ ಜನ ಪರದಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕರಾದ ಈಶ್ವರ್ ಖಂಡ್ರೆ ಇದಕ್ಕೆ ದನಿಗೂಡಿಸಿದರು. ಒಂದು ಹಂತದಲ್ಲಿ ಸಭಾಧ್ಯಕ್ಷ ಕಾಗೇರಿ ಅವರು ಕೂಡ ರಸ್ತೆಗಳ ದುಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿ, ಇದು ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆ ಎಂದಾಗ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ ಅವರು, ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳನ್ನು ಮಾತ್ರ ನಿರ್ವಹಣೆ ಮಾಡುತ್ತದೆ.

ಕೆಳದರ್ಜೆಗಿಳಿಸಲಾದ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಸ್ಥಳೀಯ ಸಂಸ್ಥೆಗಳೇ ಈ ರಸ್ತೆಗಳ ನಿರ್ವಹಣೆ ಮಾಡಬೇಕು ಎಂದು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ. ಮತ್ತೊಮ್ಮೆ ನಾವು ಸರ್ಕಾರಕ್ಕೆ ಪತ್ರ ಬರೆದು ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ರಮೇಶ್‍ಕುಮಾರ್ ಅವರು, ಮದ್ಯದಂಗಡಿಗಳು ಹೆದ್ದಾರಿಯಿಂದ ಕನಿಷ್ಠ ಅಂತದಲ್ಲಿ ಇರಬೇಕೆಂಬ ನಿರ್ದೇಶನ ನೀಡಿತ್ತು.

ಆ ಕಾರಣಕ್ಕಾಗಿ ಮದ್ಯದಂಗಡಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ಹೆದ್ದಾರಿಗಳನ್ನು ಬದಲಾವಣೆ ಮಾಡಿ ಮದ್ಯದಂಗಡಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದ ಜನರು ಸಂಕಷ್ಟಪಡುತ್ತಿದ್ದಾರೆ. ಸರ್ಕಾರ ಮದ್ಯದಂಗಡಿಗಳಿಂದಲೇ ರಸ್ತೆ ದುರಸ್ತಿಯ ಹಣ ವಸೂಲಿ ಮಾಡಲಿ ಎಂದರು. ಆಗ ಸಚಿವ ಗೋವಿಂದ ಕಾರಜೋಳ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳವ ಭರವಸೆ ನೀಡಿದರು.

Facebook Comments

Sri Raghav

Admin