ಗಂಗಾಕಲ್ಯಾಣ ಯೋಜನೆಗೆ ಪ್ಯಾಕೇಜ್ ಟೆಂಡರ್ ಕರೆಯಲು ಚಿಂತನೆ : ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.23- ಗಂಗಾಕಲ್ಯಾಣ ಯೋಜನೆಯಡಿ ಕೊರೆಯಲಾಗುವ ಬೋರ್‍ವೆಲ್‍ಗಳಿಗೆ ಸಣ್ಣ ನೀರಾವರಿ ಇಲಾಖೆಯ ಮಾದರಿಯಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲು ಚಿಂತನೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಹಾಗೂ ಮತ್ತಿತರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಂಗಾಕಲ್ಯಾಣ ಯೋಜನೆಯಿಂದ ಫಲಾನುಭವಿಗಳ ಜೀವನ ಮಟ್ಟ ಸುಧಾರಣೆಯಾಗಿದೆ. ಕೃಷಿ ಚಟುವಟಿಕೆಗಳು ಹೆಚ್ಚಾಗಿ, ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ. ಆದರೆ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ನಿಜ. ಕೆಲವೆಡೆ ಬೋರ್‍ವೆಲ್ ಕೊರೆದರೆ ಮೋಟಾರ್ ಪಂಪ್ ಅಳವಡಿಸಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಅಲ್ಲಿಂದ ವಿದ್ಯುತ್ ಸಂಪರ್ಕಕ್ಕೂ ವಿಳಂಬವಾಗುತ್ತಿರುವುದು ನಿಜ ಎಂದು ಹೇಳಿದರು.

ಈ ವಿಳಂಬವನ್ನು ತಪ್ಪಿಸಲು ಬೋರ್‍ವೆಲ್ ಕೊರೆಯುವುದರಿಂದ ಆರಂಭಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಹೊರ ಬರುವವರೆಗೂ ಸಂಪೂರ್ಣವಾದ ಪ್ಯಾಕೇಜ್ ಟೆಂಡರ್ ನೀಡಲು ಚಿಂತನೆ ನಡೆಸಲಾಗಿದೆ. ನಾನು ಈ ಹಿಂದೆ ಸಣ್ಣ ನೀರಾವರಿ ಖಾತೆ ಸಚಿವನಾಗಿದ್ದಾಗ ಈ ನಿರ್ಧಾರ ತೆಗೆದುಕೊಂಡಿದ್ದೆ. ಈಗ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಗೂ ಅದೇ ಮಾದರಿಯ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದರು.

ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತನ್ನಿ, ಇಲ್ಲವಾದರೆ ನಿಲ್ಲಿಸಿ ಬಿಡಿ ಎಂದು ಆಗ್ರಹಿಸಿದರು.ಕೆ.ಜಿ.ಬೋಪಯ್ಯ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಇಲಾಖೆಯಿಂದ 50 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಇದು ಸಾಲುವುದಿಲ್ಲ. ಮಲೆನಾಡು ಭಾಗದಲ್ಲಿ ವಿದ್ಯುತ್ ಸಂಪರ್ಕದ ವೆಚ್ಚ ದುಬಾರಿಯಾಗಲಿದೆ.

ವಿದ್ಯುತ್ ಇಲಾಖೆಯ ಎಸ್ಕಾಂಗಳು ಎಷ್ಟು ಎಸ್ಟಿಮೇಟ್ ಕೊಡುತ್ತವೇಯೋ , ಅಷ್ಟು ಹಣವನ್ನು ಸಮಾಜ ಕಲ್ಯಾಣ ಇಲಾಖೆ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆ 50 ಸಾವಿರ ಮಾತ್ರ ಕೊಡಲಿದೆ. ಇನ್ನೂ ಹೆಚ್ಚಾದರೆ ಅದನ್ನು ವಿದ್ಯುತ್ ಇಲಾಖೆಯಲ್ಲೇ ಇರುವ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಖರ್ಚು ಮಾಡಿ ಸಂಪರ್ಕ ನೀಡಲಿ ಎಂದು ಸಚಿವರು ಸಲಹೆ ನೀಡಿದರು.

Facebook Comments

Sri Raghav

Admin