ಮಂತ್ರಿಗಿರಿ ಮುಂದೆ ಶಾಸಕರಿಗೆ ಬೇಡವಾಯ್ತು ಕನ್ನಡ ಸಾಹಿತ್ಯ ಸಮ್ಮೇಳನ..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಫೆ.5- ತೊಗರಿ ನಾಡು ಕಲಬುರಗಿಯಲ್ಲಿ ನುಡಿ ಜಾತ್ರೆ ಸಡಗರ ಮನೆ ಮಾಡಿದೆ. ಆದರೆ ಇದನ್ನು ಇನ್ನಷ್ಟು ಅದ್ಧೂರಿಯಾಗಿಸುವ ಹೊಣೆ ಹೊತ್ತ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅತಿಥಿಗಳಂತೆ ನಡೆದುಕೊಂಡರೆ, ಆಡಳಿತ ಪಕ್ಷದ ಬಹುತೇಕ ಶಾಸಕರು ಮಂತ್ರಿಗಿರಿಗಾಗಿ ಬೆಂಗಳೂರಲ್ಲೇ ಬೀಡುಬಿಟ್ಟಿದ್ದಾರೆ. ಇದು ಸಹಜವಾಗಿಯೇ ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

ಸಮ್ಮೇಳನ ಯಶಸ್ವಿಯಾಗಿಸಲು ನಿರ್ಧರಿಸಿರುವ ಸ್ವಾಗತ ಸಮಿತಿ ಪ್ರಧಾನ ಸಂಚಾಲಕರೂ ಆಗಿರುವ ಜಿಲ್ಲಾಧಿಕಾರಿ ಶರತ್.ಬಿ, ಕಸಪಾ ಅಧ್ಯಕ್ಷ ಡಾ.ಮನು ಬಳಿಗಾರ್, ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ತಮ್ಮದೇ ಆದ ತಂಡ ಕಟ್ಟಿಕೊಂಡು ಅಹರ್ನಿಶಿ ತೊಡಗಿದ್ದಾರೆ. ಆದರೆ, ಆಡಳಿತ ಪಕ್ಷದ ಶಾಸಕರು ಮಾತ್ರ ರಾಜ್ಯ ರಾಜಧಾನಿಯಲ್ಲೇ ಠಿಕಾಣಿ ಹೂಡಿ ಸಚಿವ ಸ್ಥಾನ ಗಿಟ್ಟಿಸಲು ತಮ್ಮ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುವ ಕೆಲಸದಲ್ಲಿ ನಿರತರಾಗಿರುವುದು ನಿಜಕ್ಕೂ ವಿಪರ್ಯಾಸ.

ಇನ್ನು ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷ ಶಾಸಕರು ಅಧ್ಯಕ್ಷರಾಗಿರುವ ಸಮಿತಿಗಳು ತಯಾರಿಯಲ್ಲಿ ತೊಡಗಿವೆ. ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಕಾಂಗ್ರೆಸಿಗರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನೀಡಲು ಮುಂದಾಗಿದ್ದಾರೆ. ಸಮ್ಮೇಳನ ಉದ್ಘಾಟನೆ ದಿನವಾದ ಇಂದು ಕಾರಜೋಳ ಅವರೇ ಅತಿಥಿಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆ ಬಂದು ಅವರೊಟ್ಟಿಗೆ ವಾಪಸಾಗಲಿದ್ದಾರೆ. ಇವರ್ಯಾರಿಗೂ ಸಮ್ಮೇಳನದ ಇಂತಿಷ್ಟು ಖ್ಯಾಲ್(ಕಾಳಜಿ)ಇಲ್ಲ ಎಂದು ಸ್ಥಳೀಯ ಭಾಷೆಯಲ್ಲಿ ಜನತೆ ಟೀಕಿಸಿದ್ದಾರೆ.

ಪ್ರತಿಕ್ರಿಯೆ: ಸಮ್ಮೇಳನ ಹೊತ್ತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಆಗಾಗ್ಗೆ ಬಂದು ಸಭೆಗಳನ್ನು ನಡೆಸಬೇಕಿತ್ತು, ಅದೂ ಮಾಡಲಿಲ್ಲ. ಈಗ ಕೊನೆಯ ಹಂತದ ತಯಾರಿ ನೋಡಿಕೊಳ್ಳಬೇಕಾದ ಶಾಸಕರು ಸಚಿವ ಸ್ಥಾನದ ಲಾಬಿ ಮಾಡುತ್ತ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಸಮ್ಮೇಳನಕ್ಕೆ ಒಂದಿಷ್ಟು ತೊಂದರೆ ಆಗಬಹುದು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಸಾಹಿತ್ಯಾಭಿಮಾನಿಗಳು: ಒಂದು ಸಾಹಿತ್ಯ ಸಮ್ಮೇಳನ ಎಂದರೆ ಅದು ನಾಡಿನ ಸ್ವಾಭಿಮಾನದ ಸಂಕೇತ. ಆದರೆ ಆಡಳಿತಾರೂಢ ಬಿಜೆಪಿಯ ಜನಪ್ರತನಿಧಿಗಳು ಕೇವಲ ಅಧಿಕಾರದ ದಾಹಕ್ಕೆ ಹಾತೊರೆಯುತಿದ್ದಾರೆ. ಸಚಿವ ಸಂಪುಟ ವಿಸ್ತರಣೆಗಾಗಿ ರಾಜಧಾನಿ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವುದು ಬೇಸರ ತಂದಿದೆ ಎಂದು ಬಹಳಷ್ಟು ಸಾಹಿತ್ಯಾಭಿಮಾನಿಗಳು ಹೇಳಿದ್ದಾರೆ.

Facebook Comments