ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23- ಮುಂದಿನ ವರ್ಷ ಎಸ್ಸಿ-ಎಸ್ಟಿ ಸಮುದಾಯದ ಐದು ಸಾವಿರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸುವ ಗುರಿ ಇದೆ ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೇಳಿದರು. ಅಂಬೇಡ್ಕರ್ ಭವನದಲ್ಲಿ ಪರೀಕ್ಷಾ ಪೂರ್ವ ಕೌನ್ಸಿಲಿಂಗ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ನಾನಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು.

53,133 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಪರಿಶಿಷ್ಟ ಜಾತಿಯ 3373, ಪರಿಶಿಷ್ಟ ಪಂಗಡದ 966 ಸೇರಿ 3270 ಮಂದಿಯನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 9 ಮಂದಿ ವಿದೇಶಿ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು. ಪ್ರಬುದ್ಧ ಯೋಜನೆಯಡಿ ಸುಮಾರು 58ಕೋಟಿ ರೂ.ಗಳನ್ನು ತರಬೇತಿಗಾಗಿ ಖರ್ಚು ಮಾಡಲಾಗುತ್ತಿದೆ. ಹಣಕಾಸಿನ ಕೊರತೆ ಇಲ್ಲ. ಮುಂದಿನ ವರ್ಷ ಕನಿಷ್ಠ 5ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ಗುರಿ ಇದೆ ಎಂದು ಹೇಳಿದರು.

ವಿದೇಶ ಶಿಕ್ಷಣಕ್ಕೆ ಆಯ್ಕೆಯಾದ ಮಕ್ಕಳು ಬಾಬಾ ಸಾಹೇಬ್ ಅಂಬೇಡ್ಕರಂತೆ ಓದಿ ಹೆಚ್ಚಿನ ಜ್ಞಾನಿಗಳಾಗಿ, ಓದು ಮತ್ತು ಪರಿಶ್ರಮ ಗುರಿ ತಲುಪಲು ನೆರವಾಗಲಿದೆ. ಈ ಹಿಂದೆ ಗುರುಕುಲ ಮತ್ತು ಆಶ್ರಮ ಪದ್ಧತಿಯಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಬೇರೆ ವಿಷಯಗಳತ್ತ ಗಮನ ಹರಿಸಲು ಅವಕಾಶವಾಗದಂತೆ ಓದಿನತ್ತಲೇ ಗಮನ ಕೊಡುತ್ತಿದ್ದರು.

ಇಂದಿನ ದಿನಗಳಲ್ಲಿ ನಾನಾ ರೀತಿಯ ಹವ್ಯಾಸಗಳು, ಅಭ್ಯಾಸಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿವೆ. ಅವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಓದಿನತ್ತಲೇ ಗಮನ ಹರಿಸಿ, ನಿರ್ದಿಷ್ಟ ಗುರಿ ತಲುಪಿ ಎಂದು ಸಲಹೆ ನೀಡಿದರು. ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಬೇಕು. ಈ ಮೂಲಕ ತಂದೆ-ತಾಯಿಗಳಿಗೆ, ಸರ್ಕಾರಕ್ಕೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಒಳ್ಳೆ ಹೆಸರು ತನ್ನಿ ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಬೆಟ್ಟಪ್ಪ, ಇಲಾಖೆಯ ಸಲಹೆಗಾರರಾದ ಇ.ವೆಂಕಟಯ್ಯ, ಹಿರಿಯ ಅಧಿಕಾರಿಗಳ ಶಂಗಪ್ಪ, ಮಹೇಶ್ ಕಾರ್ಯಕ್ರಮದಲ್ಲಿದ್ದರು. ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಸೇರಿದಂತೆ ವಿವಿಧೆಡೆಗಳಲ್ಲಿರುವ ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಕೌನ್ಸಿಲಿಂಗ್ ವ್ಯವಸ್ಥೆ ಮಾಡಿಕೊಡಲಾಗಿತ್ತು.

Facebook Comments