ಗುಂಡಿ ಮುಚ್ಚಲು ನವೆಂಬರ್ ಅಂತ್ಯದ ವರೆಗೆ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.4-ಅತಿವೃಷ್ಟಿ, ಪ್ರವಾಹದಿಂದಾಗಿ ರಸ್ತೆಗಳು ಹಾಳಾಗಿದ್ದು ರಸ್ತೆಗಳಲ್ಲಿನ ಗುಂಡಿಗಳನ್ನು ನವೆಂಬರ್ ಅಂತ್ಯದೊಳಗೆ ಮುಚ್ಚಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು.  ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಒಂದು ವೇಳೆ ರಸ್ತೆಗುಂಡಿ ಮುಚ್ಚುವುದರಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳನ್ನು ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲು ನಿರ್ದೇಶನ ಮಾಡಿದರು.

ಸಂಬಂಧಪಟ್ಟ ಅಧಿಕಾರಿ ವಾರಕ್ಕೊಮ್ಮೆ ರಸ್ತೆಗುಂಡಿ ಮುಚ್ಚಿದ ವರದಿಯನ್ನು ನೀಡಬೇಕು. ವರದಿ ನೀಡದೆ ಬೇಜಾಬ್ದಾರಿತನ ತೋರಿದರೆ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಮತ್ತು ಅವರ ಸೇವಾ ಕಾರ್ಯ ನಿರ್ವಹಣಾ ಪುಸ್ತಕದಲ್ಲಿ ಅದನ್ನು ನಮೂದಿಸಿ ಎಂದು ಸೂಚಿಸಿದರು.

ರಾಜ್ಯದಲ್ಲಿ ಅತಿಯಾದ ಮಳೆ, ಪ್ರವಾಹ ದಿಂದಾಗಿ ರಸ್ತೆ ಸೇರಿದಂತೆ ಸಾಕಷ್ಟು ಹಾನಿ ಉಂಟಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಇಲಾಖೆ ಅಧಿಕಾರಿಗಳು ಯಾವುದೇ ಕುಂಟು ನೆಪ ಹೇಳಬಾರದು. ಒಳ್ಳೆಯ ಕೆಲಸ ಮಾಡಿ ಇಲಾಖೆಯ ಗೌರವ ಹೆಚ್ಚಿಸಿ ನಿಮಗೂ ಗೌರವ ಬರುತ್ತದೆ ಎಂದು ಹೇಳಿದರು.

ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವರ್ಗಾವಣೆ ಪತ್ರದಲ್ಲೂ ಅವರ ಕಾರ್ಯ ನಿರ್ಲಕ್ಷ್ಯತೆಯ ಬಗ್ಗೆ ನಮೂದಿಸಬೇಕು. ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ದ ಕಾನೂನು ರೀತಿ ಶಿಸ್ತುಕ್ರಮ ಕೈಗೊಳ್ಳಬೇಕು. ಯಾವುದೇ ಕಾಮಗಾರಿಗಳನ್ನು ಆರ್ಥಿಕ ಇಲಾಖೆಯ ಸಹಮತವಿಲ್ಲದೆ ಪ್ರಾರಂಭ ಮಾಡಬಾರದು. ಸಹಮತ ಪಡೆದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.

ಸುಮಾರು 50 ಇಲಾಖೆಗಳಿದ್ದು, ಆಯಾ ಇಲಾಖೆಯ ಅನುದಾನದಲ್ಲೇ ಕಟ್ಟಡಗಳನ್ನು ನಿರ್ಮಿಸಬೇಕು. ಪ್ರವಾಸಿ ಮಂದಿರಗಳ ನಿರ್ವಹಣೆ ಕುರಿತು ಯಾವುದೇ ದೂರುಗಳು ಬರಬಾರದು. ಅಗತ್ಯವಿರುವ ಕಡೆ ಮಾತ್ರ ಹೊಸ ಪ್ರವಾಸಿ ಮಂದಿರಗಳನ್ನು ನಿರ್ಮಿಸಿ. ಹಳೆ ಪ್ರವಾಸಿ ಮಂದಿರಗಳು ಚೆನ್ನಾಗಿದ್ದರೆ ಅದನ್ನೇ ಮುಂದುವರೆಸಿ ಎಂದು ಹೇಳಿದರು.

ಈ ವರ್ಷದಿಂದ 20ರಿಂದ 30 ಪ್ರವಾಸಿ ಮಂದಿರಗಳನ್ನು ನಿರ್ಮಿಸಬಹದು. ಒಂದು ವೇಳೆ ಸ್ಥಳ ಅವಕಾಶವಿಲ್ಲದಿದ್ದರೆ ಕಾಮಗಾರಿ ಕೈಗೆತ್ತಿಕೊಳ್ಳಬಾರದು. ಅನಗತ್ಯ ಹೆಚ್ಚುವರಿ ವೆಚ್ಚ ಮಾಡಿಬೇಡಿ ಎಂದ ಅವರು, ಈ ವರ್ಷ 1500 ಕೋಟಿ ರೂ. ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಈ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಿ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಶೇ.೧೦೦ರಷ್ಟು ಪ್ರಗತಿ ಸಾಧಿಸಿರಬೇಕು ಎಂದು ಸೂಚನೆ ನೀಡಿದರು.

ಪರಿಶಿಷ್ಟ ಜಾತಿ/ಪಂಗಡಗಳ ಉಪಯೋಜನೆಯ ವಿಶೇಷ ಘಟಕ ಯೋಜನೆಯಡಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಯಾವುದೇ ಕಾರಣಕ್ಕೂ ನೆಪ ಹೇಳಬಾರದು. ಈ ವರ್ಷ ಮೀಸಲಿಟ್ಟ ಆನುದಾನವನ್ನು ಇದೇ ವರ್ಷದ ಅಂತ್ಯ ದೊಳಗೆ ಖರ್ಚು ಮಾಡಬೇಕೆಂದು ತಾಕೀತು ಮಾಡಿದರು. ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಗುರುಪ್ರಸಾದ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments