ಹಾಸ್ಟೆಲ್ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ಇತರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಉಪಯೋಜನೆಯಡಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಜೆಡಿಎಸ್‍ನ ಎಚ್.ಎಂ.ರಮೇಶ್‍ಗೌಡ, ಕಾಂಗ್ರೆಸ್‍ನ ಪಿ.ಆರ್.ರಮೇಶ್ ಅವರು ಜಂಟಿಯಾಗಿ ಪ್ರಶ್ನೆ ಕೇಳಿ ಬೀದರ್‍ನ ಪಶುಸಂಗೋಪನೆ ವಿಶ್ವವಿದ್ಯಾಲಯ ಕುಲಪತಿ ಅವರು ಹಣ ದುರುಪಯೋಗ ಪಡಿಸಿಕೊಡಿದ್ದಾರೆ ಎಂದು ಆರೋಪಿಸಿದರು. ಈ ಪ್ರಶ್ನೆಗೆ ಉತ್ತರ ನೀಡಲು ಕಾಲಾವಕಾಶ ನೀಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದರು.

ಆಗ ಸಿಟ್ಟಾದ ಸದಸ್ಯ ರಮೇಶ್‍ಗೌಡ, ಇದೇ ಪ್ರಶ್ನೆಗೆ ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ಇಲ್ಲಿ ಸಮಯಾವಕಾಶ ಕೇಳುತ್ತಿದ್ದಾರೆ. ಸದರಿ ಕುಲಪತಿ ವಿಶ್ವವಿದ್ಯಾಲಯದ 9 ಕೋಟಿ ರೂಪಾಯಿಯನ್ನು ವೈಯಕ್ತಿಕ ಖಾತೆಯಲ್ಲಿಟ್ಟುಕೊಂಡಿದ್ದಾರೆ. ಬಹುಶಃ ಅವರನ್ನು ರಕ್ಷಣೆ ಮಾಡುವ ಸಲುವಾಗಿ ಸಮಯ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲಿ ಕೇಳಲಾದ ಪ್ರಶ್ನೆಯೇ ಬೇರೆ, ನಾವು ನೀಡಿರುವ ಉತ್ತರವೂ ಬೇರೆ ಎಂದು ಸಚಿವ ಪ್ರಭು ಚಹ್ವಾಣ್ ಸಮರ್ಥಿಸಿಕೊಂಡಾಗ, ಎರಡು ಪ್ರಶ್ನೆ ಮತ್ತು ಉತ್ತರಗಳು ಒಂದೇ ಎಂದು ವಾದಿಸಿದ ಸದಸ್ಯ ರಮೇಶ್‍ಗೌಡ, ಇದನ್ನು ಹಕ್ಕುಚ್ಯುತಿಗೆ ಒಪ್ಪಿಸಿ, ಒಂದು ವೇಳೆ ಪ್ರಶ್ನೆ, ಉತ್ತರ ಬೇರೆ ಇದ್ದರೆ ಸುಳ್ಳು ಹೇಳಿದವರಿಗೆ ದಂಡನೆಯಾಗಲಿ ಎಂದು ಸವಾಲು ಹಾಕಿದರು.

ಆಗ ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಉಪಯೋಜನೆಯ ಅನುಸಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೇಲ್ ವಿದ್ಯಾರ್ಥಿಗಳ ಊಟ, ವಸತಿ, ಪುಸ್ತಕ ಸೇರಿದಂತೆ ಇತರ ಮೂಲ ಸೌಲಭ್ಯಗಳಿಗಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನು ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.

ಕೆಲವರು ತಮ್ಮ ಕಚೇರಿಯ ನವೀಕರಣಕ್ಕೆ ಬಳಸಿದ್ದರೆ ಇನ್ನೂ ಕೆಲವರು ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದ್ದಾರೆ. ಮತ್ತೂ ಕೆಲವರು ವೈಯಕ್ತಿಕ ಖಾತೆಯಲ್ಲಿ ಹಣ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಚರ್ಚೆ ಮಾಡಲು ಅಧಿವೇಶನ ಮುಗಿದ ಬಳಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆಯಲು ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ಆಗ ಮಧ್ಯ ಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಉಪಯೋಜನೆಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಪರಾಧ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ಎಂದು ಒತ್ತಾಯಿಸಿದರು.

Facebook Comments