ಭಯ ಹುಟ್ಟಿಸಿದ ಓಮಿಕ್ರಾನ್, ಎಚ್ಚೆತ್ತ ರಾಜ್ಯ ಸರ್ಕಾರದಿಂದ ಬಿಗಿ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29- ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗುತ್ತಿರುವ ಹಿನ್ನೆಲೆ ಕರ್ನಾಟಕ ದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಯಾವುದೇ ರೀತಿ ಸಾಮಾಜಿಕ, ಸಾಂಸ್ಕøತಿಕ ಹಾಗೂ ಅಕಾಡೆಮಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿದೆ.

ನೆರೆಯ ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಪ್ರಯಾಣಿಕರು, ಮೇಲೆ ಹೆಚ್ಚಿನ ನಿಗಾವಹಿಸುವುದು, ಶಾಲಾಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಕೊವಿಡ್-19 ಸೋಂಕು ತಪಾಸಣೆ ನಡೆಸುವುದು, ಸೋಂಕು ಕಂಡು ಬಂದಲ್ಲಿ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.

ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳಿಗೂ ಮೊದಲು ನಡೆಸಿದ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿರುತ್ತದೆ. ಕೇರಳದಿಂದ 15 ದಿನಗಳ ಹಿಂದೆ ( ನ. 12ರಿಂದ ನವೆಂಬರ್ 27) ಕರ್ನಾಟಕದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹಾಗೂ ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಆಗಮಿಸಿರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು.

ಒಂದು ವೇಳೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟರೆ, ಅಂಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುವುದು. ಇದರ ಜೊತೆಗೆ ಕೊವಿಡ್-19 ನೆಗೆಟಿವ್ ವರದಿಯನ್ನು ಪಡೆದರೆ, ಅಂಥ ವಿದ್ಯಾರ್ಥಿ ಗಳು 7 ದಿನಗಳವರೆಗೂ ಕ್ವಾರೆಂಟೈನ್ನಲ್ಲಿ ಇರಬೇಕು, ಇದರ ಬಳಿಕ ಮತ್ತೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.

ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಗಡಿಗಳಲ್ಲಿ ಚೆಕ್ ಪೊಸ್ಟ್ ಗಳನ್ನು ತೆರೆಯಲಾಗಿದ್ದು, ಕೇರಳದಿಂದ ಆಗಮಿಸುವ ಶೇ.100ರಷ್ಟು ಪ್ರಯಾಣಿಕರನ್ನು ಕೊವಿಡ್-19 ಶಿಷ್ಟಾಚಾರದ ಪ್ರಕಾರ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಣ, ವ್ಯಾಪಾರ ಮತ್ತು ಇತರೆ ಕಾರಣಗಳಿಗೆ ಪ್ರತಿನಿತ್ಯ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ವರದಿಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ.

ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ: ಎಲ್ಲಾ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸ್ಕ್ರೀನಿಂಗ್ ಪರೀಕ್ಷೆ ನಡೆಸುವುದು. ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ನಡೆಸಿ, ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ನೀಡುವುದಕ್ಕೆ ಕ್ರಮ ಕೈಗೊಳ್ಳುವುದು. ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎರಡು ತಿಂಗಳವರೆಗೂ ಮುಂದೂಡುವುದು.

ಶೈಕ್ಷಣಿ ಸಂಸ್ಥೆಗಳಲ್ಲಿ ನಡೆಯುವ ಕಾನರೆನ್ಸ್, ಸೆಮಿನಾರ್ ಸೇರಿದಂತೆ ಯಾವುದೇ ರೀತಿ ಅಕಾಡೆಮಿಕ್ ಕಾರ್ಯಕ್ರಮಗಳನ್ನು ಕೂಡ ಮುಂದೂಡಿಕೆ ಮಾಡುವುದು. ತರಗತಿಗಳಿಗೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವಂತೆ ನೋಡಿಕೊಳ್ಳಬೇಕು, ಸಾಧ್ಯವಾದಷ್ಟು ಆನ್ ಲೈನ್ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವುದು.

ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕ್ಯಾಂಪಸ್ ನಲ್ಲಿ ಯಾವುದೇ ರೀತಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಕೊವಿಡ್-19 ಮಾರ್ಗಸೂಚಿಗಳು ಪಾಲನೆ ಆಗುವಂತೆ ಮುತುವರ್ಜಿ ವಹಿಸಬೇಕು. ಆರೋಗ್ಯ ಇಲಾಖೆಯು ಸಹ ಕಾನರೆನ್ಸ್, ಸೆಮಿನಾರ್ ಮತ್ತು ಸಿಎಂಇ ಕಾರ್ಯಾಗಾರ ಸೇರಿದಂತೆ ಎಲ್ಲ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ನಡೆಸಬೇಕು.

ಆ ಮೂಲಕ ಇತರೆ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಹಾಗೂ ಉತ್ತಮ ಸಂದೇಶವನ್ನು ರವಾನಿಸುವ ಕೆಲಸ ಮಾಡಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿ ಹಾಗೂ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವಿದ್ಯಾರ್ಥಿಯು ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

Facebook Comments

Sri Raghav

Admin