10 ಲಕ್ಷ ವಸತಿ ನಿರ್ಮಾಣಕ್ಕೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಶೀಘ್ರದಲ್ಲೇ 10 ಲಕ್ಷ ವಸತಿ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರ ವಾರ್ಡ್‍ನಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಲೋಕಾರ್ಪಣೆ ಹಾಗೂ ಅಗ್ರಹಾರ ದಾಸರಹಳ್ಳಿ ವಾರ್ಡ್‍ನಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

10 ಲಕ್ಷ ವಸತಿ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳುವ ಕುರಿತಂತೆ ಇಂದು ಸಂಜೆ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮತ್ತಿತರರೊಂದಿಗೆ ಸಚಿವ ಸಂಪುಟದ ಉಪಸಮಿತಿ ಸಭೆ ನಡೆಸಲಾಗುವುದು ಎಂದರು.

ಈಗಾಗಲೇ 1,40,000 ಮನೆ ನಿರ್ಮಿಸಲು ಕಂದಾಯ ಸಚಿವರು ಒಂದು ಸಾವಿರ ಎಕರೆ ಜಮೀನು ನೀಡಿದ್ದಾರೆ. ಇದರ ಜೊತೆಗೆ 10 ಲಕ್ಷ ಮನೆ ನಿರ್ಮಾಣಕ್ಕೂ ಸಹಕರಿಸುತ್ತಿದ್ದಾರೆ ಎಂದರು.

ಕೊರೊನಾ ಸಂಕಷ್ಟ ಕಾಲದಲ್ಲಿ ವೈದ್ಯರ ನೆರವು ಅತ್ಯಗತ್ಯ. ಇಂತಹ ಸಂದರ್ಭದಲ್ಲೇ ಗೋವಿಂದರಾಜನಗರ ವಾರ್ಡ್‍ನಲ್ಲಿ 30 ಹಾಸಿಗೆಗಳ ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ಇದರ ಜೊತೆಗೆ ಕೆಸಿಜನರಲ್ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಮಾದರಿಯಲ್ಲಿ ಅಗ್ರಹಾರ ದಾಸರಹಳ್ಳಿ ವಾರ್ಡ್‍ನಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಈ ಆಸ್ಪತ್ರೆ ನಿರ್ಮಾಣವಾದ ನಂತರ ಈ ಭಾಗದ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು ಎಂದರು.

ರೈತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಚಿವ ಮಾಧುಸ್ವಾಮಿ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಹೊರರಾಜ್ಯದವರನ್ನು ಬರಮಾಡಿಕೊಳ್ಳುತ್ತಿರುವುದೇ ಕಾರಣ ಎಂಬ ಹೇಳಿಕೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಲು ವಿ.ಸೋಮಣ್ಣ ನಿರಾಕರಿಸಿದರು.

Facebook Comments

Sri Raghav

Admin