ಸರ್ಕಾರಿ ನೌಕರರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು-ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್.ಪಿ.ಎಸ್)ಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರವು ಘೋಷಿಸಿರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಗಳಿಗೆ ನಗದುರಹಿತ ಚಿಕಿತ್ಸೆ ಸೌಲಭ್ಯ ಒದಗಿಸುವುದು ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ಅನುಷ್ಟಾನಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.ನೌಕರರ ದಶಕಗಳ ಬೇಡಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಅನುಸರಿಸುತ್ತಿರುವ ಅನಗತ್ಯ ವಿಳಂಬದಿಂದಾಗಿ ನೌಕರರು ಎದುರಿಸುತ್ತಿರುವ ಸಂಕಷ್ಟಗಳನ್ನು ಸಮಿತಿಯ ಮುಂದೆ ಮಂಡಿಸಿದ್ದು, ಈ ಬಗ್ಗೆ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೇಡಿಕೆಗಳು ಈಡೇರುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.

ಸುಮಾರು 20 ರಿಂದ 45 ವರ್ಷಗಳಿಂದ ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದಿರುವುದರಿಂದ ನೌಕರರು ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವುದು ಇಂದಿನ ತುರ್ತು ವಿಷಯಗಳಲ್ಲೊಂದಾಗಿದೆ ಎಂದವರು ನುಡಿದರು.

ಸರ್ಕಾರದ ಸುತ್ತೋಲೆಯಂತೆ ಪ್ರತಿ ವರ್ಷ ಜನವರಿಯಲ್ಲಿ ರಾಜ್ಯದ ಎಲ್ಲಾ ಇಲಾಖೆಯಲ್ಲಿ ವೃಂದವಾರು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದು ಹಾಗೂ ವರ್ಷಕ್ಕೆ 2ಬಾರಿ ಇಲಾಖಾ ಪದೋನ್ನತಿ ಸಮಿತಿಯ ಸಭೆಯನ್ನು ಏರ್ಪಡಿಸಿ ಪದೋನ್ನತಿ ನೀಡಬೇಕು. ಕೆ.ಜಿ.ಐ.ಡಿ ಇಲಾಖೆಯ ಎಲ್ಲಾ ಕಚೇರಿಗಳನ್ನು ಗಣಕೀಕರಣಗೊಳಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಕೆ.ಜಿ.ಐ.ಡಿ ವಿಮಾ ಸೌಲಭ್ಯವನ್ನು ಈಗಿರುವ 55 ವರ್ಷಗಳ ಅವಧಿಯಿಂದ 60 ವರ್ಷಗಳಿಗೆ ಹೆಚ್ಚಳ ಮಾಡುವಂತೆ ಅವರು ಸಭೆಯಲ್ಲಿ ಒತ್ತಾಯಿಸಿರುವುದಾಗಿ ಅವರು ತಿಳಿಸಿದರು.

ನಿಗಮ-ಮಂಡಳಿ, ವಿಶ್ವವಿದ್ಯಾಲಯ, ಪ್ರಾಧಿಕಾರಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಹೆಚ್.ಆರ್.ಎಂ.ಎಸ್. ತಂತ್ರಾಂಶ ಅಳವಡಿಸುವ ಮೂಲಕ ವಿವಿಧ ಸೌಲಭ್ಯಗಳಿಂದ ವಂಚಿತ ನೌಕರರಿಗೆ ನ್ಯಾಯ ದೊಕಿಸಿಕೊಡಬೇಕು, ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹೆಚ್.ಆರ್.ಎಂ.ಎಸ್/ಕೆ-2 ತಂತ್ರಾಂಶದಲ್ಲಿ ಸಹಕಾರ ಸಂಸ್ಥಗಳಿಂದ ಪಡೆದ ಸಾಲದ ಕಂತುಗಳನ್ನು ಕಟಾವಣೆ ಮಾಡಲು ಅನುಕೂಲವಾಗುವಂತೆ ಸ್ಥಳೀಯ ಕಡಿತಗಳಿಗೆ (ಐoಛಿಚಿಟ ಖeಛಿoveಡಿies) ಅವಕಾಶ ಮಾಡಿಕೊಡಬೇಕು, ಸಾಮೂಹಿಕ ವಿಮಾ ಯೋಜನೆ(ಜಿ.ಐ.ಎಸ್)ಯಲ್ಲಿರುವ ವಂತಿಗೆ ಹಾಗೂ ವಿಮಾ ಮೊತ್ತವನ್ನು ಪ್ರಸ್ತುತ ಪರಿಸ್ಥಿತಿಗನುಗುಣವಾಗಿ ಹೆಚ್ಚಳ ಮಾಡುವಂತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವುದಾಗಿ ಅವರು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ಗೃಹನಿರ್ಮಾಣ, ದುರಸ್ತಿ ಹಾಗೂ ಖರೀದಿಗೆ ಇರುವ ನಿಯಮಾವಳಿಗಳನ್ನು ಸರಳೀಕರಿಸುವುದು ಮತ್ತು ಮಂಜೂರು ಮಾಡುವ ಮುಂಗಡ ಮೊತ್ತವನ್ನು ಹೆಚ್ಚಳ ಮಾಡುವುದು, ಪ್ರತಿ ತಿಂಗಳ ಮೊದಲ ವಾರದೊಳಗಾಗಿ ನೌಕರರ ವೇತನವನ್ನು ಪಾವತಿ ಮಾಡುವುದು, ನೌಕರರಲ್ಲಿ ಕಾರ್ಯದಕ್ಷತೆ ಹೆಚ್ಚಳ ಹಾಗೂ ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಆಡಳಿತ ತರಬೇತಿ ಕೇಂದ್ರ (ಎ.ಟಿ.ಐ) ಮಾದರಿಯಲ್ಲಿ ವಿಭಾಗ ಮಟ್ಟದಲ್ಲಿ ನೂತನ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆಯೂ ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ಅವರು ನುಡಿದರು.

ಸರ್ಕಾರಿ ನೌಕರರ ಬೇಡಿಕೆಗನುಗುಣವಾಗಿ ಜಿಲ್ಲಾ / ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ದರ್ಜೆವಾರು ವಸತಿ ಗೃಹಗಳನ್ನು ನಿರ್ಮಾಣ ಮಾಡುವುದು, ಸರ್ಕಾರಿ ನೌಕರರು ವಿದೇಶ ಪ್ರವಾಸ ಕೈಗೊಳ್ಳಲು ವಿಧಿಸಿರುವ ಷರತ್ತುಗಳನ್ನು ಸರಳೀಕರಿಸುವುದು, ಸರ್ಕಾರಿ ನೌಕರರು ಪಾಸ್ ಪೋರ್ಟ್ ಪಡೆಯಲು ನಿರಾಪೇಕ್ಷಣಾ ಪತ್ರ ನೀಡುವ ಅಧಿಕಾರವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಿಕೇಂದ್ರೀಕರಿಸುವ ಬಗ್ಗೆಯೂ ಸಹ ವಿಷಯ ಪ್ರಸ್ತಾಪಿಸಿರುವುದಾಗಿ ಅವರು ತಿಳಿಸಿದರು.

ಸರ್ಕಾರಿ ನೌಕರರು ಸೇವಾವಧಿಯಲ್ಲಿ ಚರ-ಸ್ಥಿರಾಸ್ತಿ ಖರೀದಿಸುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕೆಂಬ ನಿಬರ್ಂಧವನ್ನು ಸಡಿಲಿಸಿ, ಖರೀದಿಸಿದ ಮಾಹಿತಿಯನ್ನು ಸಕ್ಷಮ ಪ್ರಾಧಿಕಾರಿಗಳಿಗೆ ವರದಿ ಮಾಡುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಬೇಕು, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಆರು ಜಿಲ್ಲೆಗಳ ನೌಕರರು ಹಾಗೂ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಇನ್ನೊಂದು 371(ಜೆ) ಕಾನೂನು ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಅವರು ತಿಳಿಸಿದರು.

ಶಿಕ್ಷಣ ಇಲಾಖೆಯ ಉಪನ್ಯಾಸಕರು, ಪ್ರೌಢ ಶಾಲಾ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು ಪದೋನ್ನತಿ ಹೊಂದಿದ ಸಂಧರ್ಭದಲ್ಲಿ ಅವರ ಹಿಂದಿನ ಸೇವಾಧಿಯನ್ನು ಪರಿಗಣಿಸಿ ಹತ್ತು ವರ್ಷಗಳ ಕಾಲಮಿತಿ ಬಡ್ತಿ, 15, 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು, ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಗುರುತಿಸಲ್ಪಟ್ಟಿರುವ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ಆರೋಗ್ಯ ಇಲಾಖೆಯಲ್ಲಿ ಪದೋನ್ನತಿ ನೀಡುವ ಸಂದರ್ಭದಲ್ಲಿ ಪರಿಗಣಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು, ಇಲಾಖೆಗಳನ್ನು ವಿಲೀನಗೊಳಿಸುವ ಸಲುವಾಗಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಯು ತನ್ನ ವರದಿ ಸಲ್ಲಿಸುವ ಪೂರ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದೊಂದಿಗೆ ಸಮಾಲೋಚನೆ ನಡೆಸುವಂತೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು. ಸಭೆಯಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಜೆ.ಸಿ.ಜಾಫರ್, ಸಂಘದ ಪದಾಧಿಕಾರಿ ಜಗದೀಶ್ ಪಾಟೀಲ, ಆರ್.ಶ್ರೀನಿವಾಸ್, ಶಿವರುದ್ರಯ್ಯ, ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ ಕುಮಾರ್, ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಸಂಬಂಧಿತ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin