ಸರ್ಕಾರಿ ನೌಕರರ ಅವಲಂಬಿತರ ಆದಾಯದ ಮಿತಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Govt-Employee
ಬೆಂಗಳೂರು, ಜೂ.27- ರಾಜ್ಯ ಸರ್ಕಾರಿ ನೌಕರರ ಅವಲಂಬಿತ ಪೋಷಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಮಾಸಿಕ ಆದಾಯದ ಮಿತಿಯನ್ನು 8,500ರೂ.ಗಳಿಗೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಮೂಲ ಪಿಂಚಣಿ 8,500ರೂ. ಆಗಿದ್ದು, ಆರ್ಥಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸಿದ ತುಟ್ಟಿಭತ್ಯೆ ದರಗಳನ್ನು ಕೂಡ ಮಾಸಿಕ ಆದಾಯದ ಮಿತಿಗೆ ಸೇರಿಸಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆರನೇ ವೇತನ ಆಯೋಗದ ವರದಿ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯು ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಿದ್ದು, ಕನಿಷ್ಠ ನಿವೃತ್ತಿ ವೇತನವನ್ನು ಮಾಸಿಕ 4,800ರಿಂದ 8,500ರೂ.ಗಳಿಗೆ ಹೆಚ್ಚಿಸಿ ಕಳೆದ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ನಿಗದಿಪಡಿಸಲಾಗಿದೆ. ಹೀಗಾಗಿ ಏ.1ರ ನಂತರ ಚಿಕಿತ್ಸೆ ಪಡೆದಿರುವ ಸರ್ಕಾರಿ ನೌಕರರ ಅವಲಂಬಿತ ಪೋಷಕರಿಗೆ ಮೇಲಿನ ಆದಾಯ ಮಿತಿಯಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕಳೆದ 2003ರಲ್ಲಿ ಸರ್ಕಾರ ಮಾಸಿಕ 4,800ರೂ.ಗಳನ್ನು ಕನಿಷ್ಠ ಮೂಲ ಪಿಂಚಣಿ ಎಂದು ಪರಿಗಣಿಸಲಾಗಿತ್ತು. ಸರ್ಕಾರಿ ನೌಕರರ ವೈದ್ಯಕೀಯ ಹಾಜರಾತಿ ನಿಯಮಗಳ ಆದಾಯದ ಮಿತಿ 6ಸಾವಿರ ರೂ.ಗಳು ಎಂಬ ಪದಗಳ ಬದಲಿಗೆ ರಾಜ್ಯ ಸರ್ಕಾರವು ನಿಗದಿ ಪಡಿಸಿದ ಕನಿಷ್ಠ ಮೂಲಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ಪರಿಗಣಿಸುವ ದಿನಾಂಕವನ್ನು ಕನಿಷ್ಠ ಮೂಲಪಿಂಚಣಿಗೆ ಲಭ್ಯವಾಗುವ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತ ಎಂಬ ಪದಗಳನ್ನು ಪ್ರತಿಷ್ಠಾಪಿಸಿ ತಿದ್ದುಪಡಿ ಮಾಡಲಾಗಿದೆ.

Facebook Comments

Sri Raghav

Admin