ಬೆಂಗಳೂರು ಸುತ್ತಮುತ್ತ ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ಸಿಬ್ಬಂದಿ ಬಳಕೆಗೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು. 10-ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೋವಿಡ್ ನಿಯಂತ್ರಿಸಲು ಕಣ್ಗಾವಲು ಉದ್ದೇಶಕ್ಕಾಗಿ ಐವತ್ತು ವರ್ಷದೊಳಗಿನ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕೊರೊನಾ ಕರ್ತವ್ಯಕ್ಕೆ ಸಿಬ್ಬಂದಿಯ ಕೊರತೆ ನೀಗಿಸಲು ಸರ್ಕಾರದ ಎಲ್ಲಾ ಇಲಾಖೆಯ ಸಿಬ್ಬಂದಿಯನ್ನು ಬಳಸಲು ಸರ್ಕಾರ ನಿರ್ಧರಿಸಿದೆ.

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮಾಹಿತಿ ಒದಗಿಸಲು ಎಲ್ಲಾ ಇಲಾಖೆಗಳಿಗೆ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ವಿಜಯ್ ಭಾಸ್ಕರ್ ಅವರು ನಿರ್ದೇಶನ ನೀಡಿದ್ದಾರೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಅನ್ ಲಾಕ್ -2  ಅವಧಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಯುವ ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿದೆ.

ಇದಕ್ಕಾಗಿ  ಸಿಬ್ಬಂದಿಗಳ ಅವಶ್ಯಕತೆ ಇರುವುದರಿಂದ ಸರ್ಕಾರದ ಇಲಾಖೆಯ, ಎಲ್ಲ ಸಾರ್ವಜನಿಕ ವಲಯದ ಘಟಕಗಳಲ್ಲಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ವಾಸವಾಗಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರೂಪ್ ಎ , ಬಿ ಮತ್ತು ಸಿ ವೃಂದದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮಾಹಿತಿಯನ್ನು  ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಆದರೆ, ಗರ್ಭಿಣಿ, ಬಾಣಂತಿಯರು ಹಾಗೂ ವಿಕಲಚೇತನರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ‌. ಆಯಾ ಇಲಾಖೆ ಹಾಗೂ  ಸಂಸ್ಥೆಯಲ್ಲಿನ ಶೇ.25 ರಿಂದ 50 ರಷ್ಟು ಸಿಬ್ಬಂದಿಯನ್ನು ಇಲಾಖೆಯ ಅಗತ್ಯ ಕೆಲಸಗಳಿಗಾಗಿ ಉಳಿಸಿಕೊಳ್ಳಬಹುದು. ಉಳಿದ ಶೇ. 50 ರಿಂದ 75 ರಷ್ಟು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಪಟ್ಟಿಯನ್ನು  ವಿಳಾಸ ಸಹಿತ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಪೂರ್ಣ ಸಮಯದ ಆಧಾರದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಡಿಯಲ್ಲಿ ಈ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ.

ಮಾಹಿತಿಯನ್ನು ಕಳುಹಿಸುವ ಮೊದಲು ಪ್ರಸ್ತುತ ವಿಳಾಸ , ವಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಬಂಧಪಟ್ಟ ಸಿಬ್ಬಂದಿಯಿಂದ ಖಚಿತಪಡಿಸಿಕೊಂಡು ಪರಿಶೀಲಿಸಿ ನಾಳೆಯೊಳಗೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.

Facebook Comments

Sri Raghav

Admin