BIG NEWS : ರಾಜ್ಯ ಸರ್ಕಾರಿ ನೌಕರರಲ್ಲಿ ಶುರುವಾಯ್ತು ಹುದ್ದೆ ಕಡಿತದ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.2- ಆಡಳಿತ ಸುಧಾರಣೆ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ವೆಚ್ಚ ಕಡಿತ, ಹುದ್ದೆ ಕಡಿತದ ಲೆಕ್ಕಾಚಾರದಲ್ಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಂಪುಟ ಉಪಸಮಿತಿ ವರದಿಯನ್ನು ಸಿದ್ಧಪಡಿಸುತ್ತಿದೆ. ಇತ್ತ ಸರ್ಕಾರಿ ನೌಕರರಿಗೆ ಹುದ್ದೆ ಕಡಿತದ ಆತಂಕ ಶುರುವಾಗಿದೆ.

ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ವೆಚ್ಚ ಕಡಿತದ ಮೊರೆ ಹೋಗಿದೆ. ಅದಕ್ಕಾಗಿ ಸರ್ಕಾರ ವಿವಿಧ ಇಲಾಖೆ, ಕಚೇರಿಗಳ ವಿಲೀನ, ಹುದ್ದೆ ಕಡಿತದ ಚಿಂತನೆಯಲ್ಲಿದೆ.

ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಸಂಪುಟ ಉಪ ಸಮಿತಿ ಈಗಾಗಲೇ ಈ ಸಂಬಂಧ ಎಲ್ಲಾ ಇಲಾಖೆಗಳು, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯಿಂದ ವರದಿ ತರಿಸಿಕೊಳ್ಳುತ್ತಿದೆ. ಅದರಂತೆ ಸಚಿವಾಲಯದಲ್ಲಿನ ಕೆಲ ಹುದ್ದೆಗಳನ್ನು ಕಡಿತಗೊಳಿಸುವ ಬಗ್ಗೆಯೂ ಪ್ರಸ್ತಾಪ ಇದೆ.

ಸಚಿವಾಲಯದಲ್ಲಿನ ವಿವಿಧ ಇಲಾಖೆಗಳ ಹುದ್ದೆ ಕಡಿತದ ಬಗ್ಗೆಯೂ ಪ್ರಸ್ತಾಪ ಇದೆ. ಪ್ರಸ್ತುತ 6ನೇ ವೇತನ ಆಯೋಗದ 2ನೇ ಸಂಪುಟದ ಶಿಫಾರಸಿನ ಕಿರಿಯ ಸಹಾಯಕರು/ಬೆರಳಚ್ಚುಗಾರರು ಮತ್ತು ಶೀಘ್ರ ಲಿಪಿಗಾರರ ವೃಂದದ ಹುದ್ದೆಗಳನ್ನು ಕಡಿತ ಅಥವಾ ರದ್ದುಗೊಳಿಸುವ ಬಗ್ಗೆ ಪ್ರಸ್ತಾಪ ಇದೆ.

ಅದರಂತೆ ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರಿಗೆ ಹುದ್ದೆ ಕಡಿತದ ಆತಂಕ ಎದುರಾಗಿದೆ.ಸಚಿವಾಲಯದಲ್ಲಿ ಗ್ರೂಪ್ ಬಿ ವೃಂದದಲ್ಲಿ ಮಂಜೂರಾತಿ ಪಡೆದ 53 ಗೆಜೆಟೆಡ್ ಆಪ್ತ ಸಹಾಯಕರಿದ್ದು, ಆ ಪೈಕಿ 46 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರೂಪ್ ಸಿ ವೃಂದದಲ್ಲಿ ಮಂಜೂರಾತಿ ಪಡೆದ ಹಿರಿಯ ಸ್ಟೆನೋಗ್ರಾಫರ್ 57 ಹುದ್ದೆಗಳ ಪೈಕಿ 31 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.  ಮಂಜೂರಾತಿ ಪಡೆದ 408 ಸ್ಟೆನೋಗ್ರಾಫರ್ ಹುದ್ದೆಯಲ್ಲಿ 204 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಂಜೂರಾತಿ ಪಡೆದ 313 ಹಿರಿಯ ಟೈಪಿಸ್ಟ್ ಹುದ್ದೆ ಪೈಕಿ 30 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾತಿ ಪಡೆದ 542 ಕಿರಿಯ ಸಹಾಯಕರ ಹುದ್ದೆ ಪೈಕಿ 187 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ಹುದ್ದೆ ಕಡಿತದ ಆತಂಕ ಎದುರಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈಗಾಗಲೇ ಹುದ್ದೆ ಕಡಿತ ಬೇಡ ಎಂದು ವರದಿ ನೀಡಿದೆ. ಆದರೂ ಸಂಪುಟ ಉಪ ಸಮಿತಿ ಹುದ್ದೆ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ.

ವೆಚ್ಚ ಕಡಿತ ಹಾಗೂ ಹುದ್ದೆ ಕಡಿತವನ್ನು ವಿರೋಸಿ ರಾಜ್ಯ ಸರ್ಕಾರಿ ನೌಕರರು ಜೂ. 4ರಂದು ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿಧಾನಸೌಧದಲ್ಲಿ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುತ್ತಾ ನೌಕರರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Facebook Comments

Sri Raghav

Admin